ಊರಿಗೆ ಊರೇ ಕಂಬನಿ ಮಿಡಿಯುತ್ತಿದೆ

ಊರಿಗೆ ಊರೇ ಕಂಬನಿ ಮಿಡಿಯುತ್ತಿದೆ

ಹುಬ್ಬಳ್ಳಿ : ತಾಲೂಕಿನ ಅದರಗುಂಚಿ ಗ್ರಾಮದ ರೈತ ಅಶೋಕ ಗಾಮನಗಟ್ಟಿ ಕುಟುಂಬವು ತನ್ನ ಮನೆಯಲ್ಲಿ 1994ರ ಜುಲೈ 12ರಂದು ಜನಸಿದ ಎತ್ತಿಗೆ ರಾಮ ಎಂದು ನಾಮಕರಣ ಮಾಡಿ ಮಗನಂತೆ ಜೋಪಾನ ಮಾಡಿದ್ದರು.

ಆತ ವನವಾಸ ಮಾಡಿದ ರಾಮನಲ್ಲ. ತನಗೆ ಅದು ಬೇಕು-ಇದು ಬೇಕು ಎಂದು ಹಂಬಲಿಸುವ ಮನುಷ್ಯ ಜೀವಿಯಂತೂ ಅಲ್ಲವೇ ಅಲ್ಲ. ಆದರೆ ತನ್ನ ಜೀವನವನ್ನೇ ಒಂದು ಕುಟುಂಬಕ್ಕಾಗಿ ಶ್ರಮಿಸಿದ ನಿಸ್ವಾರ್ಥ ಜೀವಿ ಈ ರಾಮ. ಅವನ ಅಗಲಿಕೆಗೆ ಕುಟುಂಬ ಮಾತ್ರವಲ್ಲದೆ ಊರಿಗೆ ಊರೇ ಕಂಬನಿ ಮಿಡಿದಿದೆ.

ಪ್ರತಿವರ್ಷ ರಾಮನ ಹುಟ್ಟುಹಬ್ಬದಂದು ಕೇಕ್ ಕತ್ತರಿಸಿ ಆರತಿ ಬೆಳಗುವ ಮೂಲಕ ಮನೆಯ ಸದಸ್ಯರಲ್ಲಿ ಒಬ್ಬನಂತೆ ನೋಡುತ್ತಿದ್ದರು.  ಸುಮಾರು 27 ವರ್ಷಗಳ ಕಾಲ ರೈತ ಅಶೋಕ ಗಾಮನಗಟ್ಟಿ ಕುಟುಂಬಕ್ಕಾಗಿಯೇ ದುಡಿದ ರಾಮ ಇಂದು (ಗುರುವಾರ) ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಮ ಮಾಡಿದ ಸೇವೆಯನ್ನು ಮನೆ ಮಂದಿ ಮಾತ್ರವಲ್ಲದೆ ಗ್ರಾಮಕ್ಕೆ ಗ್ರಾಮವೇ ಮೆಲುಕು ಹಾಕುತ್ತಿದೆ. ಮೃತ ರಾಮನಿಗೆ ಅಂತಿಮ ಸಂಸ್ಕಾರ ಮಾಡಲು ನಿರ್ಧರಿಸಿದ್ದ ಕುಟುಂಬಸ್ಥರು, ಟ್ರ‍್ಯಾಕ್ಟರ್‌ನಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಸಕಲ ವಾದ್ಯ ಮೇಳದೊಂದಿಗೆ ಊರಲ್ಲಿ ಮೆರವಣಿಗೆ ಮಾಡಿದರು.
ಇಂದು ನಿಧನ ಹೊಂದಿದ ರಾಮನಿಗೆ ಗಾಮನಗಟ್ಟಿ ರೈತ ಕುಟುಂಬ ಕಣ್ಣೀರು ಸಮರ್ಪಣೆ ಮಾಡಿದೆ.

ಮೂಕ ಪ್ರಾಣಿಯ ಜೊತೆಗೆ ಈ ಕುಟುಂಬ ಉತ್ತಮ ಬಾಂಧವ್ಯ ಹೊಂದಿತ್ತು. ದಿನದ 24 ಗಂಟೆಯೂ ರಾಮನೊಂದಿಗೆ ಒಡನಾಟ ಹೊಂದಿದ್ದ ಅಶೋಕ ಗಾಮನಗಟ್ಟಿ ಕುಟುಂಬ ರಾಮನಿಲ್ಲದೆ ಅನಾಥಭಾವದಲ್ಲಿ ಕಣ್ಣೀರು ಹಾಕಿದೆ. ರಾಮನ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತೇ ಹುಟ್ಟಿ ಬಾ ರಾಮ ಎಂದು ಗ್ರಾಮಸ್ಥರು ರಾಮನಿಗೆ ವಿದಾಯ ಹೇಳುತ್ತಿದರು.

Related