ಒಪ್ಪದ ಮದುವೆ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಒಪ್ಪದ ಮದುವೆ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಮೇದಿನಿನಗರ: ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶವಿದೆ. ಆದರೂ ಸಹ ಹೆಣ್ಣು ಮಗಳಿಗೆ ಎಲ್ಲಿಲ್ಲದ ಕಿರುಕುಳ, ಹಿಂಸೆ, ಅವಮಾನ ಇಂದಿನ ಕಾಲದಲ್ಲೂ ಸಹ ಮುಂದುವರಿಯುತ್ತಾ ಬಂದಿದೆ.

ಕಾಲ ಎಷ್ಟೇ ಮುಂದುವರೆದಿದ್ದರು, ಹೆಣ್ಣು ಅಡುಗೆ ಮನೆಯಿಂದ ಅಂತರಿಕ್ಷಕ್ಕೆ ಕಾಲಿರಿಸಿದ್ದರೂ ಆಕೆಯ ಮೇಲಿನ ದೌರ್ಜನ್ಯ ಮಾತ್ರ ಇಂದಿಗೂ ಒಂದಲ್ಲಒಂದು ಕಡೆ ನಡೆಯುತ್ತಲೇ ಇದೆ. ಇದಕ್ಕೆ ಮತ್ತೊಂದು ಉದಾಹರಣೆ ಜಾರ್ಖಂಡ್‌ನಲ್ಲಿ ನಡೆದಿರುವ ಅಮಾನವೀಯ ಘಟನೆ. ಹುಡುಗಿಯೊಬ್ಬಳು ಮದ್ವೆಗೆ ಒಪ್ಪಲಿಲ್ಲ ಎಂದು ಊರಿನ ಜನ ಎಲ್ಲಾ ಸೇರಿ ಆಕೆಯ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಊರ ತುಂಬಾ ಮೆರವಣಿಗೆ ಮಾಡಿ ಅವಮಾನಿಸಿದ್ದಾರೆ. ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಹೀಗೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಈ ಘಟನೆ ನಡೆದಿದೆ.

ಹೆಣ್ಣು ಕಲಿತಿರಲಿ ಕಲಿಯದೇ ಇರಲಿ ಜೀವನ ಸಂಗಾತಿಯ ಆಯ್ಕೆ ಅವಳಿಷ್ಟ ಏಕೆಂದರೆ ಮುಂದೇನಾದರು ಆದಲ್ಲಿ ಬಾಳಿ ಬದುಕಬೇಕಾದವಳು ಅವಳೆ. ಆದರೆ ಇಲ್ಲಿ ಕುಟುಂಬ ನೋಡಿದ  ಹುಡುಗನನ್ನು ಈ ಹುಡುಗಿ ಮದುವೆಯಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕುಟುಂಬದವರು ಸಂಬಂಧಿಕರು ಪಂಚಾಯಿತಿ ಸೇರಿಸಿ ಆಕೆಯ ತಲೆ ಬೋಳಿಸುವ ನಿರ್ಧಾರಕ್ಕೆ ಬಂದು ಹಾಗೆಯೇ ಮಾಡಿದ್ದಾರೆ.

ಜಾರ್ಖಂಡ್ ರಾಜಧಾನಿ ರಾಂಚಿಯಿಂದ 185 ಕಿಲೋ ಮೀಟರ್ ದೂರದಲ್ಲಿರುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಗಿಯ ಅತ್ತಿಗೆ, ಮೂವರು ಪಂಚಾಯತ್ ಸದಸ್ಯರು ಸೇರಿದಂತೆ ಒಟ್ಟು ನಾಲ್ವರನ್ನು ವಿಚಾರಣೆಗಾಗಿ ಪೊಲೀಸರು ಬಂಧಿಸಿದ್ದಾರೆ ಎಂದು ಪಟನ್ ಪೊಲೀಸ್ ಠಾಣೆಯ ಇನ್‌ಚಾರ್ಜ್  ಗುಲ್ಸನ್ ಗೌರವ್ ಹೇಳಿದ್ದಾರೆ.

ಹೀಗೆ ಸಂಬಂಧಿಗಳಿಂದಲೇ ಅವಮಾನಿತಳಾದ ಹುಡುಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಆಕೆಗೆ  ಮೇದಿನಿಗರದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಸ್ಥರು ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಯುವತಿಯ ಮದುವೆ ಏಪ್ರಿಲ್ 20 ರಂದು ನಿಗದಿಯಾಗಿತ್ತು. ಆದರೆ ಮದುವೆಯಾಗುವ ಹುಡುಗ ಗ್ರಾಮ ಆ ದಿನದಂದು ಗ್ರಾಮಕ್ಕೆ ತಲುಪುತ್ತಿದ್ದಂತೆ ಹುಡುಗಿ ಮದುವೆಯಾಗುವುದಕ್ಕೆ ನಿರಾಕರಿಸಿದ್ದಾಳೆ. ಇದಾದ ಬಳಿಕ 20 ದಿನಗಳ ಕಾಲ ಹುಡುಗಿ ಕಾಣೆಯಾಗಿದ್ದು ಭಾನುವಾರ ಮರಳಿ ಗ್ರಾಮಕ್ಕೆ ಬಂದಿದ್ದಳು. ಅವಳು ಗ್ರಾಮಕ್ಕೆ ವಾಪಸಾದ ಸುದ್ದಿ ತಿಳಿದು ಜನ ಸೇರಿದ್ದು, ಪಂಚಾಯಿತಿ ಮಾಡಲು ನಿರ್ಧರಿಸಿದ್ದಾರೆ. ಆಕೆಯ ಸಂಬಂಧಿಗಳು ಹಾಗೂ ಕುಟುಂಬದವರನ್ನು ಒಟ್ಟು ಸೇರಿಸಿದ್ದಾರೆ.

ಅಲ್ಲದೇ ಆಕೆಯನ್ನು ಇಷ್ಟು ದಿನ ಎಲ್ಲಿ ಹೋಗಿದ್ದೆ ಏನಾಯಿತು ನಿನಗೆ ಎಂದು ಹುಡುಗಿಯನ್ನು ಪ್ರಶ್ನಿಸಿದ್ದಾರೆ. ಆದರೆ ಆಕೆ ಇವರ ಪ್ರಶ್ನೆಗೆ ಉತ್ತರಿಸಿದೇ ಬಾಯಿ ಮುಚ್ಚಿ ಕುಳಿತಿದ್ದು, ಇದರಿಂದ ಸಿಟ್ಟಿಗೆದ್ದ ಜನ ಆಕೆಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆಕೆಯ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಊರ ತುಂಬಾ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಗುಲ್ಶನ್ ಗೌರವ್‌ ಹೇಳಿದ್ದಾರೆ.

Related