ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸಚಿವ ಸ್ಥಾನ?

ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸಚಿವ ಸ್ಥಾನ?

ಕೊಪ್ಪಳ : ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಲಾಬಿ ಕೂಡಾ ಜೋರಾಗಿ ನಡೆದಿದ್ದು, ಇಲ್ಲಿಯ ಸಂಸದ ಸಂಗಣ್ಣ ಕರಡಿ ಹೆಸರು ಮಂಚೂಣಿಯಲ್ಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಶೀಘ್ರದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪನವರ ದೆಹಲಿ ಪ್ರವಾಸ ಮಾಡಲಿದ್ದು, ಸಚಿವ ಸಂಪುಟ ವಿಸ್ತರಣೆ ಜೊತೆಗೆ ಈ ವಿಷಯವನ್ನೂ ಪ್ರಸ್ತಾಪ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

‘ಬೀದರ್ ಲೋಕಸಭಾ ಕ್ಷೇತ್ರದಿಂದ ಭಗವಂತ ಖೂಬಾ ಎರಡು ಬಾರಿ, ರಾಯಚೂರು ಕ್ಷೇತ್ರದಿಂದ ರಾಜಾ ಅಮರೇಶ್ವರ ನಾಯಕ, ಬಳ್ಳಾರಿಯ ದೇವೇಂದ್ರಪ್ಪ, ಕಲಬುರ್ಗಿಯ ಡಾ.ಉಮೇಶ ಜಾಧವ ಪ್ರಥಮ ಬಾರಿ ಚುನಾಯಿತರಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದ, ಎರಡು ಬಾರಿ ಸಂಸದರಾದ ಸಂಗಣ್ಣ ಕರಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯವಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರಿಗೂ ಸಂಗಣ್ಣ ಅತ್ಯಂತ ಆಪ್ತರಾಗಿದ್ದಾರೆ’ ಎನ್ನುತ್ತಾರೆ ಕರಡಿ ಅವರ ಆಪ್ತರೊಬ್ಬರು.

ಸಂಘ ಪರಿವಾರದ ಬೆಂಬಲ ಇನ್ನೂ ದೊರೆಯಬೇಕಿದೆ. ಪಂಚಮಸಾಲಿ ಪೀಠಗಳು ಸಮಾಜಕ್ಕೆ ಸಚಿವ ಸ್ಥಾನ ನೀಡಬೇಕು ಎಂಬ ಮನವಿಯ ಕಾರಣ ಸಂಗಣ್ಣ ಕರಡಿ ಅವರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ.

Related