ಇದು ಕನ್ನಡಿಗರ ಹಿತ ಕಾಯುವ ಚಳವಳಿ : ಸಿಎಂ

ಇದು ಕನ್ನಡಿಗರ ಹಿತ ಕಾಯುವ ಚಳವಳಿ : ಸಿಎಂ

ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿರುವ ಹೋರಾಟ ಕರ್ನಾಟಕದ, ಕನ್ನಡಿಗರ ಹಿತ ಕಾಪಾಡುವ ಚಳವಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

100 ರೂ. ಗಳಲ್ಲಿ ರಾಜ್ಯಕ್ಕೆ ಕೇವಲ 12 ರಿಂದ 13 ರೂ.

ಇದು ಐತಿಹಾಸಿಕವಾದ ಪ್ರತಿಭಟನೆ. 14 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 4.71 % ಬಂದಿತ್ತು. 15 ನೇ ಹಣಕಾಸು ಆಯೋಗದಲ್ಲಿ 3.64 % ಕ್ಕೆ ಇಳಿಯಿತು. ಇದರಿಂದ ರಾಜ್ಯಕ್ಕೆ ಬರುವ ತೆರಿಗೆಯಲ್ಲಿ ಶೇ. 40 ರಿಂದ 45 ರವರೆಗೆ ಕಡಿತವಾಗಿದೆ. ಒಟ್ಟಾರೆಯಾಗಿ 14 ನೇ ಹಣಕಾಸು ಆಯೋಗದ ಶಿಫಾರಸ್ಸನ್ನೇ 15 ನೇ ಹಣಕಾಸು ಆಯೋಗದಲ್ಲಿ ಅನುಸರಿಸಿದ್ದರೆ, ರಾಜ್ಯಕ್ಕೆ 62,098 ಕೋಟಿ ರೂ. ರಾಜ್ಯಕ್ಕೆ ಬರುತ್ತಿತ್ತು.

ರಾಜ್ಯದಿಂದ ಒಟ್ಟು 4,30,000 ಕೋಟಿ ತೆರಿಗೆ ಮೊತ್ತವನ್ನು ಕೇಂದ್ರಕ್ಕೆ ನೀಡಲಾಗುತ್ತದೆ. ಅಂದರೆ 100 ರೂ. ತೆರಿಗೆಯಲ್ಲಿ ರಾಜ್ಯಕ್ಕೆ ಕೇವಲ 12 ರಿಂದ 13 ರೂ. ದೊರೆಯುತ್ತಿದೆ. ಇದು ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ. ಕರ್ನಾಟಕದಿಂದ 25 ಸಂಸದರು ಆಯ್ಕೆಯಾಗಿದ್ದು, ಒಬ್ಬರೂ ಈ ಬಗ್ಗೆ ಕೇಂದ್ರ ಮುಂದೆ ಮಾತನಾಡಿಲ್ಲ. ಅಲ್ಲದೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿಯವರು ಈ ಅನ್ಯಾಯವನ್ನು ಸರಿಪಡಿಸುವ ಮನವಿ ಮಾಡಿರುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ಇಂದು ನವದೆಹಲಿಯಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

 

 

Related