ಶತ್ರು ವಿರುದ್ಧ ಹೋರಾಡೋದು ದೇಶ – ಸಿದ್ದು

ಶತ್ರು ವಿರುದ್ಧ ಹೋರಾಡೋದು ದೇಶ – ಸಿದ್ದು

ಬೆಂಗಳೂರು : ದೇಶಕ್ಕಾಗಿ ಬೆವರು-ರಕ್ತ ಹರಿಸಿದ ನಾಯಕರ ಪಕ್ಷವಾದ ಕಾಂಗ್ರೆಸ್ ಪಕ್ಷ ಭಾರತದ ಏಕತೆ, ಅಖಂಡತೆ ಮತ್ತು ಸಾರ್ವಭೌಮತೆಗೆ ಸದಾ ಬದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಟ್ವಿಟ್ ಮೂಲಕ ತಿಳಿಸಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ವೀರ ಸೈನಿಕರ ಬಲಿದಾನ ವ್ಯರ್ಥವಾಗಬಾರದು. ಹುತಾತ್ಮರ ಕುಟುಂಬಕ್ಕೆ ಗೌರವದ ಶ್ರದ್ಧಾಂಜಲಿ ಸಲ್ಲಿಸೋಣ. ಚೀನಾದ ದುಷ್ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸೋಣ ಎಂದು ಸಿದ್ದರಾಮಯ್ಯ ಭಾರತ-ಚೀನಾ ಯೋಧ ನಡುವಿನ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಶತ್ರು ದೇಶದ ವಿರುದ್ಧ ಹೋರಾಡುವುದು ಸರ್ಕಾರ ಅಲ್ಲ, ದೇಶ. ಸರ್ಕಾರ ದೇಶಕ್ಕೆ, ದೇಶದ ಜನತೆಗೆ ಉತ್ತರದಾಯಿ. ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರ ಸರ್ಕಾರವನ್ನು ನಂಬಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆಯೂ ಕೇಂದ್ರ ಸರ್ಕಾರದ್ದು ಎಂದಿದ್ದಾರೆ.

ವಿವಾದಿತ ತಿದ್ದುಪಡಿ ಕೈಬಿಡಿ

ವಿವಾದಿತ ಭೂಸುಧಾರಣಾ ಕಾಯ್ದೆ ತಿದ್ದುಪಡಿ ನಿರ್ಧಾರವನ್ನು ಕೈಬಿಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಕೇರಳ ರಾಜ್ಯದಲ್ಲಿ ಕುಟುಂಬವೊಂದು ಗರಿಷ್ಠ 20 ಎಕರೆ ಭೂಮಿಯನ್ನು ಹೊಂದಬಹುದು. ತಮಿಳುನಾಡಿನಲ್ಲಿ 30 ಎಕರೆ, ಆಂಧ್ರಪ್ರದೇಶದಲ್ಲಿ 54 ಎಕರೆ, ಬಿಹಾರದಲ್ಲಿ 45 ಎಕರೆಗಳನ್ನು ಹೊಂದಬಹುದಾಗಿದೆ. ಆದರೆ ಕರ್ನಾಟಕದಲ್ಲಿ 216 ಎಕರೆ ಭೂಮಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಅಕ್ಕಪಕ್ಕದ ಎಲ್ಲಾ ರಾಜ್ಯಗಳಲ್ಲಿ ತೋಟದ ಭೂಮಿ 10 ಎಕರೆ ಹೊಂದಬಹುದಾದರೆ ನಮ್ಮಲ್ಲಿ 56 ಎಕರೆ ಮತ್ತು ನೀರಾವರಿ ಭೂಮಿಯನ್ನು 80 ಎಕರೆಯವರೆಗೆ ಹೊಂದಲು ಅವಕಾಶ ಮಾಡಲು ಹೊರಟಿರುವುದಾಗಿ ತಿಳಿದು ಬಂದಿದೆ ಇದರಿಂದಾಗಿ ನೀರಾವರಿ ಭೂಮಿಯು ಬಂಡವಾಳಶಾಹಿಗಳ ಪಾಲಾಗುತ್ತದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಹೆಸರಿನಲ್ಲಿ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಹೊರಟಿರುವ ತೀರ್ಮಾನವನ್ನು ತಕ್ಷಣವೇ ಕೈ ಬಿಡಬೇಕು. ಜೊತೆಗೆ ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಈ ಕ್ಷಣದಿಂದ ರದ್ದುಪಡಿಸಬೇಕು. ಮತ್ತು ಕೇಂದ್ರ ಸರ್ಕಾರ ಈ ಎರಡು ಕಾಯ್ದೆಗಳನ್ನು ಕೇಂದ್ರವು ಕೈಬಿಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Related