ಅನಾವಶ್ಯಕವಾಗಿ ಓಡಾಡುತ್ತಿದ್ದವರಿಗೆ ಬ್ರೇಕ್

ಅನಾವಶ್ಯಕವಾಗಿ ಓಡಾಡುತ್ತಿದ್ದವರಿಗೆ ಬ್ರೇಕ್

ಟಿ.ದಾಸರಹಳ್ಳಿ: ಕೊರೊನ 2 ನೇ ಅಲೆ ಪ್ರಾರಂಭವಾಗಿರುವುದರಿಂದ ರಾಜ್ಯ ಸರ್ಕಾರ ಹೊರಡಿಸಿರುವ ಎರಡು ದಿನಗಳ ಕಾಲ ಲಾಕ್ ಡೌನ್ ಜಾರಿಯಲ್ಲಿದೆ. ದಿನ ನಿತ್ಯ ಬಳಸುವ ವಸ್ತುಗಳಿಗೆ ಹಾಗೂ ಅಗತ್ಯ ವಸ್ತುಗಳಿಗೆ ಬೆಳಿಗ್ಗೆ 6 ರಿಂದ 10 ಗಂಟೆಗಳ ಕಾಲ ಸಮಯವನ್ನು ನಿಗದಿ ಮಾಡಲಾಗಿತ್ತು.
ಅಗತ್ಯ ವಸ್ತುಗಳ ಖರೀದಿಗೆ ನೀಡಿದ ಸಮಯ ಅಂತ್ಯಗೊಂಡ ತಕ್ಷಣವೇ ಕಾರ್ಯಪ್ರವೃತ್ತರಾದ ಬಾಗಲಗುಂಟೆ ಪೊಲೀಸ್ ಠಾಣೆ, ಪೀಣ್ಯ ಪೊಲೀಸ್ ಠಾಣೆ, ರಾಜಗೋಪಾಲನಗರ ಪೊಲೀಸರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ಸರ್ಕಲ್ ಹಾಗೂ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಅನಾವಶ್ಯಕವಾಗಿ ಓಡಾಡುವವರಿಗೆ ಬ್ರೇಕ್ ಹಾಕುವ ಮೂಲಕ ವೀಕೆಂಡ್ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದಾರೆ.

ಇದರ ಪರಿಣಾಮವಾಗಿ ಸದಾ ಗಿಜಿಗುಡುತ್ತಿದ್ದ ಪೀಣ್ಯ ಎರಡನೇ ಹಂತ ಬಸ್ ನಿಲ್ದಾಣ, 8ನೇ ಮೈಲ್ ವೃತ್ತ, ಜಾಲಹಳ್ಳಿ ಕ್ರಾಸ್ ಸಂಪೂರ್ಣ ಸ್ತಬ್ಧವಾಗಿರುವುದು ಕಂಡುಬಂತು ಮೆಡಿಕಲ್ ಶಾಪ್ ಹಾಗೂ ಕ್ಲಿನಿಕ್ ಹೊರತುಪಡಿಸಿ ಬಹುತೇಕ ರಸ್ತೆಯ ಎಲ್ಲ ಅಂಗಡಿಗಳು ಬಂದಾಗಿದ್ದು ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ.
ಬೆಂಗಳೂರು ತುಮಕೂರು ರಾಜ್ಯ ಹೆದ್ದಾರಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಂಡುಬಂದಿದ್ದು 8ನೇ ಮೈಲ್ ವೃತ್ತದ ಬಳಿ ಪೀಣ್ಯ ಹಾಗೂ ಬಾಗಲಗುಂಟೆ ಪೊಲೀಸ್‌ನವರಿಂದ ವಾಹನಗಳ ತಪಾಸಣೆಯನ್ನು ಮಾಡಿ ಬೆಂಗಳೂರಿನ ಕಡೆ ಬಿಡಲಾಯಿತು.
ದಿನೇ ದಿನೇ ಹೆಚ್ಚುತ್ತಿರುವ ಕೊರೋನವನ್ನು ಬ್ರೇಕ್ ಮಾಡಲು ಸರ್ಕಾರ ಕೈಗೊಂಡಿರುವ ವೀಕೆಂಡ್ ಲಾಕ್ ಡೌನ್ ಬಹುತೇಕ ಯಶಸ್ವಿಯಾಗಿದ್ದು, ಪೊಲೀಸರು ಅನಾವಶ್ಯಕವಾಗಿ ಓಡಾಡುವವರಿಗೆ ದಂಡ ಹಾಕಿ, ಗಾಡಿಗಳನ್ನು ಸೀಜ್ ಮಾಡುವುದರ ಜೊತೆಗೆ ಲಾಠಿ ರುಚಿ ತೋರಿಸುತ್ತಿರುವುದರಿಂದ ಹೆದರಿದ ಜನರು ಒಟ್ಟಿನಲ್ಲಿ ಸಾರ್ವಜನಿಕರು ವೀಕೆಂಡ್ ಲಾಕ್ಡೌನ್ ಗೆ ಜೈ ಎಂದಿದ್ದಾರೆ.

Related