ಬಿಜೆಪಿ ಸರ್ಕಾರ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ಆಜ್ಞೆ

ಬಿಜೆಪಿ ಸರ್ಕಾರ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ಆಜ್ಞೆ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಸ್ಲಿಮರಿಗೆ (2ಬಿ) ರದ್ದುಗೊಳಿಸುವಂತೆ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ಆಜ್ಞೆ ನೀಡಿದೆ.

28 ಕ್ಯಾಟಗರಿಯಲ್ಲಿ ಮೀಸಲಾತಿ ಪಡೆಯುತ್ತಿದ್ದ ಮುಸ್ಲಿಮರಿಗೆ ಸಿಎಂ ಬೊಮ್ಮಾಯಿ ಸರ್ಕಾರ ತನ್ನ ಕೊನೆಯ ಕ್ಯಾಬಿನೆಟ್‌ನಲ್ಲಿ ಕೊಕ್ ನೀಡಲು ನಿರ್ಧರಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೊರ್ಟ್‌ಗೆ ಅರ್ಜಿ ಸಲ್ಲಿಕೆ ಆಗಿದ್ದವು.

ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಅವರ ನೇತೃತ್ವದ ಪೀಠ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.  ಇನ್ನು ಸುಪ್ರೀಂ ಕೋರ್ಟ್​​ನ ಈ ತಡೆಯಾಜ್ಞೆಯಿಂದ ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ಮೀಸಲಾತಿ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಏಕೆಂದರೆ ಸರಿಯಾಗಿ ಒಂದು ತಿಂಗಳ ಹಿಂದೆ ಮಾ.24 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.

ಈ ವೇಳೆ ಅನೇಕ ವಿಚಾರಗಳನ್ನು ಚರ್ಚಿಸಲಾಗಿತ್ತು. ಇದರಲ್ಲಿ ಪ್ರಮುಖವಾಗಿ ಪ್ರಬಲ ಎರಡು ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡುವ ವಿಚಾರವಾಗಿ ಚರ್ಚೆ ನಡೆದಿತ್ತು. ಈ ಸಭೆಯಲ್ಲಿ ಮುಸ್ಲಿಮರಿಗೆ 2ಬಿ ಅಡಿ ನೀಡಲಾಗಿದ್ದ ಶೇ4 ರಷ್ಟು ಮೀಸಲಾತಿಯನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ತಲಾ ಶೇ 2ರಂತೆ ಸಮವಾಗಿ ಹಂಚಲಾಗಿತ್ತು. ನಂತರ ಮುಸ್ಲಿಮರನ್ನು ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ ಮೀಸಲಾತಿ ನೀಡಲು ನಿರ್ಧರಿಸಿ, 2ಬಿಯನ್ನು ರದ್ದುಗೊಳಿಸಿತ್ತು.

ಮುಂದಿನ ಆದೇಶದವರೆಗೆ ಮುಸ್ಲಿಂ ಸಮುದಾಯದ ಶೇಕಡಾ 4ರಷ್ಟು ಹಾಗೂ ಒಬಿಸಿ ಮೀಸಲಾತಿ ರದ್ದು ಆಧಾರದ ಮೇಲೆ ದಾಖಲಾತಿ, ನೇಮಕಾತಿ ಮಾಡಬಾರದು ಎಂದು ಏಪ್ರಿಲ್ 13 ರಂದು ಸೂಚಿಸಿತ್ತು.

ಅದರಂತೆ ಇಂದು ಕೂಡ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತನ್ನ ಹಿಂದಿನ ಆದೇಶವನ್ನು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ. ಮೇ 9 ರಂದು ಮುಂದಿನ ವಿಚಾರಣೆ ನಡೆಸುವುದಾಗಿ ಕೋರ್ಟ್‌ ತಿಳಿಸಿದೆ.

Related