ಮರಗಳನ್ನು ಕಡಿಯದಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಮರಗಳನ್ನು ಕಡಿಯದಂತೆ ವಿದ್ಯಾರ್ಥಿಗಳ ಪ್ರತಿಭಟನೆ

ದಾಸರಹಳ್ಳಿ: ಅಬ್ಬಿಗೆರೆಯಿಂದ ಚಿಕ್ಕಬಾಣಾವರಕ್ಕೆ ಹೋಗುವ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಲು ಮರಗಳನ್ನು ಕಡಿಯಲು ಬಂದ ಸಿಬ್ಬಂದಿಗಳಿಗೆ ಮರ ಕಡಿಯದಂತೆ ಗುರುವಾರ ಅಬ್ಬಿಗೆರೆ ಶಾಲಾ ಮಕ್ಕಳು ಕೈಯಲ್ಲಿ ನಾಮಫಲಕಗಳನ್ನು ಹಿಡಿದು ಮರಗಳನ್ನು ಸುತ್ತುವರಿದು ತಬ್ಬಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ವಾರ್ಡ್ 12 ಶೆಟ್ಟಿಹಳ್ಳಿ ವ್ಯಾಪ್ತಿಗೆ ಬರುವ ಶಾಲೆ ಆವರಣದಲ್ಲಿರುವ ಮರಗಳನ್ನು ರಸ್ತೆ ಅಗಲೀಕರಣ ಹೆಸರಿನಲ್ಲಿ ಕಡಿಯಲು ಮುಂದಾದ ಬಿಬಿಎಂಪಿ ಸಿಬ್ಬಂದಿಗೆ ವಿದ್ಯಾರ್ಥಿಗಳು ತಂಡೋಪ ತಂಡವಾಗಿ ಬಂದು ಆವರಣದಲ್ಲಿರುವ ಮರಗಳನ್ನು ಕಡಿಯಬಾರದು, ನಮ್ಮ ಶಾಲೆಯ ಮಕ್ಕಳಿಗೆ ಇರುವ ಮೈದಾನವನ್ನು ಯಾವುದೇ ಕಾರಣಕ್ಕೆ ರಸ್ತೆ ಅಭಿವೃದ್ಧಿಗೆ ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಘೋಷಣೆಗಳನ್ನು ಕೂಗಿದರು. ಸುಮಾರು 40 ಮರಗಳಿದ್ದು, ಹಿಂದೆ ವಿದ್ಯಾರ್ಥಿಗಳು ಮೈಲಿ ದೂರದಿಂದ ನೀರು ಹೊತ್ತು ತಂದು ಬೆಳೆಸಿದ್ದಾರೆ. ಅಂತಹ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯಬಾರದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರಿ ಶಾಲೆ ಉಳಿಸಿ, ನಾವು ಬೆಳೆಸಿದ ಮರಗಳನ್ನು ರಕ್ಷಿಸಿ ಎಂದು ಮಕ್ಕಳು ಅಂಗಲಾಚುತ್ತಿದ್ದಾರೆ. ಗಿಡ ಮರಗಳನ್ನು ಬೆಳೆಸಿ ಪ್ರಕೃತಿ ಉಳಿಸಿ ಎಂದು ಬೊಬ್ಬೆ ಹೊಡೆಯುವ ಸರ್ಕಾರ, ಅಭಿವೃದ್ಧಿ ಹೆಸರಿನಲ್ಲಿ ಬೃಹದಾಕಾರವಾಗಿ ಬೆಳೆದು ನಿಂತ ಮರಗಳನ್ನು ಕಡಿಯುವುದು ಎಷ್ಟರಮಟ್ಟಿಗೆ ಸರಿ ಎಂದು ವಿದ್ಯಾರ್ಥಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

Related