ರಾಜ್ಯದ ಬಿಜೆಪಿಯ ಸ್ಥಿತಿ ಒಂದು ಮನೆ ನೂರು ಬಾಗಿಲು: ಡಿಸಿಎಂ

ರಾಜ್ಯದ ಬಿಜೆಪಿಯ ಸ್ಥಿತಿ ಒಂದು ಮನೆ ನೂರು ಬಾಗಿಲು: ಡಿಸಿಎಂ

ಬೆಂಗಳೂರು: ನಾಲ್ಕು ವರೆ ವರ್ಷಗಳ ಕಾಲ ದುರಾಡಳಿತ ಮತ್ತು ಭ್ರಷ್ಟಾಚಾರದ ಹಗರಣಗಳಲ್ಲಿಯೇ ಕಾಲ ಕಳೆದಿದ್ದ ಭಾರತೀಯ ಜನತಾ ಪಕ್ಷಕ್ಕೆ ನಮ್ಮ ಸರ್ಕಾರದ ಸಾಧನೆಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನ ದಿಗಿಲು ಹುಟ್ಟಿಸಿದೆ ಇದಕ್ಕಾಗಿ ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯೊಬ್ಬನ ಬಂಧನದ ಎಳೆ ಹಿಡಿದುಕೊಂಡು ನೇತಾಡುತ್ತಿದ್ದಾರೆ. ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ ಬಿಜೆಪಿ ನಾಯಕರ ವಿರುದ್ದ ಗುಡುಗಿದ್ದಾರೆ.

ಬುಧವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಯಡಿಯೂರಪ್ಪನವರಿಗಿಂತ ದೊಡ್ಡ ಹಿಂದೂ? ರಾಮ ಭಕ್ತ ಯಾರಿದ್ದಾರೆ? ಹಾಗಿದ್ದರೆ ಆಗಿನ ಸರ್ಕಾರ ಹಿಂದು ವಿರೋಧಿಯೇ? ಬಿಜೆಪಿ ಬಿಟ್ಟು ಬಿಡಿ, ಅದರ ಪರಿವಾರದ ನಾಯಕರು ಕೂಡಾ ಹಿಂದೂ ಯಡಿಯೂರಪ್ಪನವರನ್ನು ಬಂಧಿಸಿದ ಸರ್ಕಾರ ಹಿಂದು ವಿರೋಧಿ ಎಂದು ಕೂಗಾಡಲಿಲ್ಲವಲ್ಲ? ಈಗ ಯಾಕೆ ಈ ಕೂಗಾಟ? ಎಂದರು.

ರಾಜ್ಯದ ಬಿಜೆಪಿಯ ಸ್ಥಿತಿ ಒಂದು ಮನೆ ನೂರು ಬಾಗಿಲು ಎಂಬಂತಾಗಿದೆ. ಆ ಪಕ್ಷದ ರಾಜ್ಯಾಧ್ಯಕ್ಷರನ್ನು ಅದೇ ಪಕ್ಷದ ಹಿರಿಯ ನಾಯಕರು ಈಗಲೂ ಒಪ್ಪಿಕೊಂಡಿಲ್ಲ, ವಿರೋಧ ಪಕ್ಷದ ನಾಯಕರ ಮಾತಿಗೆ ಸದನದಲ್ಲಿಯೇ ಸದಸ್ಯರು ಬಿಡಿಗಾಸಿನ ಕಿಮ್ಮತ್ತು ಕೊಟ್ಟಿಲ್ಲ. ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ದ ದಿನಕ್ಕೊಂದು ಗಂಭೀರ ಸ್ವರೂಪದ ಆರೋಪ ಮಾಡುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕನಿಷ್ಠ ಒಂದು ಎಚ್ಚರಿಕೆಯ ನೋಟೀಸ್ ನೀಡಲಾಗದಷ್ಟು ಪಕ್ಷ ನಿರ್ವಿರ್ಯವಾಗಿದೆ. ಕಾಂಗ್ರೆಸ್ ಸರ್ಕಾರ ದಿನದಿಂದ ದಿನಕ್ಕೆ ಜನಾನುರಾಗಿಯಾಗುತ್ತಿದೆ. ಈ ಹತಾಶೆಯಿಂದ ಹೊರಬರಲು ಒಬ್ಬ ಕ್ರಿಮಿನಲ್ ಆರೋಪಿಯನ್ನು ಮುಂದಿಟ್ಟು ಬಿಜೆಪಿ ನಾಯಕರು ಕೂಗಾಡುತ್ತಿದ್ದಾರೆ.

ಒಬ್ಬ ಕ್ರಿಮಿನಲ್ ಆರೋಪಿಯನ್ನು ಸಮರ್ಥಿಸುವಂತಹ ದುಸ್ಥಿತಿ ಒಂದು ರಾಷ್ಟ್ರೀಯ ಪಕ್ಷಕ್ಕೆ ಬರಬಾರದಿತ್ತು. ಹುಬ್ಬಳ್ಳಿಯ ಆರೋಪಿಯನ್ನು ಸಮರ್ಥಿಸಿಕೊಂಡು ಹೋರಾಟಕ್ಕೆ ಇಳಿದಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ ಸ್ವಲ್ಪ ಬುದ್ದಿಗಿದ್ದಿ ಹೊಂದಿದವರಿದ್ದರೆ ದಯವಿಟ್ಟು ಆ ವ್ಯಕ್ತಿಯ ಮೇಲಿನ ಆರೋಪಗಳ ಪಟ್ಟಿಯನ್ನು ತರಿಸಿ ಓದಿ, ಆ ಮೇಲೆ ಹೋರಾಟಕ್ಕೆ ಇಳಿಯಿರಿ. ಜನಸಂಖ್ಯೆಯಲ್ಲಿ ಹಿಂದೂಗಳೇ ಬಹುಸಂಖ್ಯೆಯಲ್ಲಿರುವುದರಿಂದ ಜೈಲುಗಳಲ್ಲಿರುವ ಕೈದಿಗಳಲ್ಲಿಯೂ ಹಿಂದೂ ಧರ್ಮಿಯರೇ ಬಹುಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಹಿಂದೂ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಬಿಜೆಪಿ ಅವರ ಪರವಾಗಿ ಹೋರಾಟ ನಡೆಸುತ್ತಾ ಎಂದು ಪ್ರಶ್ನಿಸಿದರು.

 

Related