ಸಚಿವ ಜಮೀರ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

ಸಚಿವ ಜಮೀರ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು: ಸ್ಪೀಕರ್ ಪೀಠದ ಕುರಿತು ಸಚಿವ ಜಮೀರ್ ಅಹ್ಮದ್ ಆಡಿದ ಮಾತನ್ನು ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಣಯಿಸಿದೆ.
ಡಾ. ಅಂಬೇಡ್ಕರ್‌ರವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಪ್ಪುಚುಕ್ಕಿ ಇಡುವ ರೀತಿಯಲ್ಲಿ ಸಚಿವ ಜಮೀರ್ ಅಹ್ಮದ್ ಮಾತನಾಡಿದ್ದಾರೆ.

ಹೇಳಿಕೆಯನ್ನು ಖಂಡಿಸಿ ಮತ್ತು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ಒತ್ತಾಯಿಸಿ ಎಸ್‌ಸಿ ಮೋರ್ಚಾ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡಿಸೆಂಬರ್ 2, 3 ಅಥವಾ ಸದನ ನಡೆಯುವಾಗಲೇ 4ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಸಚಿವ ಜಮೀರ್ ಅಹ್ಮದ್ ಅವರು ಮಂತ್ರಿಯಾಗಿ ಮುಂದುವರಿಯಲು ಯೋಗ್ಯರಲ್ಲ. ಆ ಕಾರಣದಿಂದ ಅವರು ಬೆಳಗಾವಿಯಲ್ಲಿ ನಡೆಯುವ ಸದನಕ್ಕೆ ಅವರು ಹಾಜರಾಗಬಾರದು ಎಂದು ಆಗ್ರಹಿಸಿದರು.
ಗುರುವಾರ ನಡೆದ ಎಸ್‌ಸಿ ಮೋರ್ಚಾ ರಾಜ್ಯ ವಿಶೇಷ ಸಭೆಯು ಜಮೀರ್ ಹೇಳಿಕೆಯನ್ನು ಖಂಡಿಸಿದೆ ಎಂದು ಹೇಳಿದ ಅವರು ಸ್ಪೀಕರ್ ಸ್ಥಾನ ಎಂಬುದು ಸಾಂವಿಧಾನಿಕ ಸ್ಥಾನ. ಆ ಸ್ಥಾನಕ್ಕೆ ಪ್ರತಿಯೊಬ್ಬರೂ ಗೌರವ ಕೊಡಬೇಕಾಗುತ್ತದೆ, ಅದು ವ್ಯಕ್ತಿಗೆ ಕೊಡುವ ಗೌರವವಲ್ಲ. ಜಮೀರ್ ಅವರು ಈ ಸ್ಥಾನವನ್ನು ಧರ್ಮಕ್ಕೆ ಅಂಟಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.
ಕಾಂತರಾಜು ವರದಿ ಕುರಿತು ಮಾತನಾಡಿದ ಅವರು, ಕಾಂತರಾಜು ಆಯೋಗದ ವರದಿ ನೀಡುವಾಗ ಎಲ್ಲರ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿಲ್ಲ. ಅದು ಜಾತಿಗಣತಿ ಅಲ್ಲ. ಜಾತಿಗಣತಿ ಮಾಡಲು ಸೆನ್ಸಸ್ ಡಿಪಾರ್ಟ್ಮೆಂಟ್ ಹೊರತುಪಡಿಸಿ ಬೇರೆ ಯಾರಿಗೂ ಅಧಿಕಾರ ಇಲ್ಲ ಎಂದು ಹೇಳಿದರು.
ಅದು ಸಮೀಕ್ಷೆ ಮಾತ್ರ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿದ್ದರೆ ಅದಕ್ಕೆ ಮೌಲ್ಯವಿದೆ. ಆದರೆ, ಎಲ್ಲರ ವಿರೋಧದ ಮಧ್ಯದಲ್ಲಿ ಇಂಥ ವರದಿ ಬೇಕಿಲ್ಲ. ಎಲ್ಲರೂ ಒಪ್ಪುವ, ಮೆಚ್ಚುವ ರೀತಿಯಲ್ಲಿ ವರದಿ ಬಂದರೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.

Related