ವಿದ್ಯಾರ್ಥಿಗಳೇ, ಪೋಷಕರ ಭರವಸೆ ಉಳಿಸಿ

ವಿದ್ಯಾರ್ಥಿಗಳೇ, ಪೋಷಕರ ಭರವಸೆ ಉಳಿಸಿ

ಬೆಂಗಳೂರು : ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮವಾದ ವಿದ್ಯಾಭ್ಯಾಸ ಪಡೆದುಕೊಳ್ಳುವ ಮೂಲಕ ತಮ್ಮ ಭವಿಷ್ಯ ಉತ್ತುಂಗ ಮಟ್ಟದಲ್ಲಿ ಸಾಗುವಂತೆ ಶ್ರಮವಹಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಸಲಹೆ ನೀಡಿದರು.

ಎಸ್‌ಎಸ್‌ಆರ್ ವಿಭಾಗದ ರೋಟರಿ ಕ್ಲಬ್ ಹಾಗೂ ಐ ವ್ಯಾಲ್ಯೂ ಇನ್ಫೋಸಲ್ಯೂಷನ್ಸ್ ಜ್ಞಾನ ದೀವಿಗೆ ಎಂಬ ಕಾರ್ಯಕ್ರಮದಡಿ ಅಗರ ಶಾಲೆಯ ಸಭಾಂಗಣದಲ್ಲಿ ಸುಮಾರು 150 ಅಗರ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿ ನೇತೃತ್ವದಲ್ಲಿ ಸೋಮವಾರ ಟ್ಯಾಬ್ ವಿತರಣೆ ಮಾಡಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಯಾವುದೇ ವಿಪತ್ತುಗಳು ಎದುರಾದರೂ ಮೊದಲು ಸ್ಪಂದಿಸುವುದು ರೋಟರಿ ಕ್ಲಬ್. ಅಗರ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಹಾಗೂ ಐ ವ್ಯಾಲ್ಯೂ ಇನ್ಫೋಸಲ್ಯೂಷನ್ಸ್ ಜೊತೆಗೂಡಿ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ಇಬ್ಬರಿಂದ ಒಂದು ಟ್ಯಾಬ್ ಎಂಬ ಲೆಕ್ಕಾಚಾರದಂತೆ ಒಟ್ಟು 25 ಸಾವಿರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸುತ್ತಿರುವುದು ಸಂತಸದ ವಿಚಾರ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಟ್ಯಾಬ್‌ನ್ನು ಪಡೆದು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉಜ್ವಲ ಭವಿಷ್ಯವನ್ನು ನಿಮ್ಮದಾಗಿಸಿಕೊಳ್ಳಿ ಶಾಲಾ ಸಿಬ್ಬಂದಿ, ಪೋಷಕರು ನಿಮ್ಮ ಮೇಲಿಟ್ಟಿರುವ ಬಹುದೊಡ್ಡ ಭರವಸೆ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಮಾತನಾಡಿದ ಶಾಸಕ ಎಂ.ಸತೀಶ್ ರೆಡ್ಡಿ ಅವರು, ಕೊರೋನಾ ಕಾರಣ ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ಆದ ಕಾರಣ ಬಡ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಳಿಗೂ ಉಪಯೋಗವಾಗಲೇಂಬ ಕಾರಣಕ್ಕೆ ಟ್ಯಾಬ್ ವಿತರಿಸಿದರು.

ಈ ಟ್ಯಾಬ್ ವಿತರಣೆ ಕೇವಲ ರಾಜಕಾರಣಿಗಳಿಗೆ ಮಾತ್ರ ಸೀಮಿತವಾಗದೆ ರೋಟರಿ ಕ್ಲಬ್ ಹಾಗೂ ಐ ವ್ಯಾಲ್ಯೂ ಇನ್ಫೋಸಲ್ಯೂಷನ್ಸ್ ಅವರು ಸಹ ಜ್ಞಾನ ದೀವಿಗೆ ಮೂಲಕ ರಾಜ್ಯದೆಲ್ಲೆಡೆ ಸರ್ಕಾರಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆಯಲ್ಲಿ ತೊಡಗಿರುವುದು ಶ್ಲಾಘನೀಯ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಕಾಲೇಜು ಹೀಗೆ ಎಲ್ಲಾ ಹಂತದ ಶಿಕ್ಷಣ ವ್ಯವಸ್ಥೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸತತ ಏಳೆಂಟು ವರ್ಷಗಳ ಪ್ರಯತ್ನದಿಂದ ಪ್ರತಿ ಮುಖಂಡರ ನೆರವಿನಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊರತೆ ಎದುರಾಗಬಾರದೆಂಬ ಉದ್ದೇಶದಿಂದ  ಶಾಲೆಯ ಅಭಿವೃದ್ಧಿಗಾಗಿ ಹಾಗೂ ಎಲ್ಲಾ ರೀತಿಯ ಸಹಕಾರ ಸೌಲಭ್ಯ ಒದಗಿಸುವುದಕ್ಕಾಗಿ ಸುಮಾರು ಮೂರು ಕೋಟಿ ಅನುದಾನವನ್ನು ಮೀಸಲಿಟ್ಟಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಮುಖ್ಯಸ್ಥರು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ, ರೋಟರಿ ಜಿಲ್ಲಾ ಗವರ್ನರ್ 3190 ನಾಗೇಂದ್ರ ಪ್ರಸಾದ್, ಐ ವ್ಯಾಲ್ಯೂ ಇನ್ಫೋಸಲ್ಯೂಷನ್ಸ್ನ ಸಂಸ್ಥಾಪಕ ಶ್ರೀನಿವಾಸ್, ಶ್ರೀರಾಮ್, ರೋಟರಿ ಕ್ಲಬ್ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related