ರಣವೀರ್​ -ಆಲಿಯಾ ​ ಹೊಸ ಪ್ರೇಮ್​ ಕಹಾನಿ

ರಣವೀರ್​ -ಆಲಿಯಾ ​ ಹೊಸ ಪ್ರೇಮ್​ ಕಹಾನಿ

ನಟಿ ಆಲಿಯಾ ಭಟ್​ ಅವರು ರಣಬೀರ್​ ಕಪೂರ್​ ಜೊತೆ ಡೇಟಿಂಗ್​ ಮಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಅದರ ನಡುವೆಯೇ ಆಲಿಯಾ ಮತ್ತು ರಣವೀರ್​ ಸಿಂಗ್​ ಜೋಡಿಯ ಒಂದು ಪ್ರೇಮ್​ ಕಹಾನಿಯನ್ನು ಜಗತ್ತಿಗೆ ತೋರಿಸಲು ಕರಣ್​ ಜೋಹರ್​ ಪ್ಲಾನ್​ ಮಾಡಿದ್ದಾರೆ.

ಅಂದಹಾಗೆ, ಇದು ಇವರಿಬ್ಬರ ರಿಯಲ್​ ಲವ್​ಸ್ಟೋರಿ ಅಲ್ಲ. ಹೊಸದೊಂದು ಸಿನಿಮಾದಲ್ಲಿ ರಣವೀರ್​ ಸಿಂಗ್​ ಹಾಗೂ ಆಲಿಯಾ ಒಂದಾಗುತ್ತಿದ್ದು, ಅದಕ್ಕೆ ಕರಣ್​ ಜೋಹರ್​ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾ ಹೆಸರು, ರಾಖಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ.

ರಣವೀರ್​ ಸಿಂಗ್​ ಜನ್ಮದಿನ ಆ ಪ್ರಯುಕ್ತ ರಾಖಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಸಿನಿಮಾ ಅನೌನ್ಸ್​ ಆಗುವ ನಿರೀಕ್ಷೆ ಇದೆ. ಕರಣ್​ ಜೋಹರ್​ ಹಲವು ವರ್ಷಗಳ ಬಳಿಕ ನಿರ್ದೇಶನ ಮಾಡುತ್ತಿರುವುದರಿಂದ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ. 2016ರಲ್ಲಿ ಐಶ್ವರ್ಯಾ ರೈ ಮತ್ತು ರಣಬೀರ್​ ಕಪೂರ್​ ಜೋಡಿಯ ‘ಯೇ ದಿಲ್​ ಹೈ ಮುಷ್ಕಿಲ್​’ ಚಿತ್ರದ ಬಳಿಕ ಬೇರೆ ಯಾವುದೇ ಸಿನಿಮಾಗೂ ಕರಣ್​ ನಿರ್ದೇಶನ ಮಾಡಿರಲಿಲ್ಲ.

ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿ ಎಂದ ತಕ್ಷಣ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚುತ್ತದೆ. ಯಾಕೆಂದರೆ, ಈ ಪ್ರತಿಭಾವಂತ ಕಲಾವಿದರಿಬ್ಬರು ಜೊತೆಯಾಗಿ ನಟಿಸಿದ್ದ ‘ಗಲ್ಲಿ ಬಾಯ್​’ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡಿದ್ದೂ ಅಲ್ಲದೆ, ಹಲವು ಪ್ರಶಸ್ತಿಗಳನ್ನು ಬಾಚಿ ಕೊಂಡಿತ್ತು. ಹಾಗಾಗಿ ಇವರಿಬ್ಬರು ಮತ್ತೆ ಜೊತೆಯಾಗಿ ನಟಿಸಲಿರುವ ‘ರಾಖಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದ ಬಗ್ಗೆ ಹೈಪ್​ ಆಗುತ್ತಿದೆ.

ಇದೇ ಸಿನಿಮಾದಲ್ಲಿ ಶಬನಾ ಆಜ್ಮಿ, ಧರ್ಮೇಂದ್ರ, ಜಯಾ ಬಚ್ಚನ್​ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿರ್ದೇಶಕರೇ ಅಧಿಕೃತ ಮಾಹಿತಿ ನೀಡಬೇಕಿದೆ. ಇಂದು ರಣವೀರ್​ ಸಿಂಗ್​ ಜನ್ಮದಿನಕ್ಕೆ ಸೆಲೆಬ್ರಿಟಿಗಳು, ಸ್ನೇಹಿತರು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅದರ ಜೊತೆ ಹೊಸ ಸಿನಿಮಾ ಅನೌನ್ಸ್​ ಆದರೆ ಫ್ಯಾನ್ಸ್​ಗೆ ಹೆಚ್ಚು ಖುಷಿ ಆಗಲಿದೆ.

Related