40 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಕಾಮಗಾರಿ

40 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಕಾಮಗಾರಿ

ಬೊಮ್ಮನಹಳ್ಳಿ: ಸಾರ್ವಜನಿಕರಿಗೆ ಸ್ವಚ್ಛಂದ ವಾತಾವರಣ ಹಾಗೂ ರಾಜಕಾಲುವೆ ಇಕ್ಕೆಲಗಳಲ್ಲಿ ವಾಕಿಂಗ್ ಪಾಥ್ ನಿರ್ಮಿಸಲಾಗುವುದು ಎಂದು ಶಾಸಕ ಎಂ. ಸತೀಶ್ ರೆಡ್ಡಿ ನುಡಿದರು.

ಇಂದು 40 ಕೋಟಿ ವೆಚ್ಚದಲ್ಲಿ ಸಿಲ್ಕ್ಬೋರ್ಡ್ನಿಂದ, ಅಗರ ಕೆರೆ, ಜಕ್ಕಸಂದ್ರದವರೆಗೆ ರಾಜಕಾಲುವೆ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಮಳೆ ಬಂದರೆ ಸಾಕು ಹೆಚ್.ಎಸ್.ಆರ್. ಬಡಾವಣೆಯ ಹಲವು ಸೆಕ್ಟರ್‌ಗಳು, ಸಿಲ್ಕ್ ಬೋರ್ಡ್ನಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.  ಮೆಟ್ರೋ ಕಾಮಗಾರಿ ಚಾಲನೆಯಲ್ಲಿದ್ದು, ರಾಜಕಾಲುವೆ ಇಕ್ಕೆಲಗಳಲ್ಲಿರುವ ತಡೆಗೋಡೆಗಳೆಲ್ಲಾ ಉರುಳಿ ಹೋಗಿದೆ. ಸುಮಾರು 2 ಕಿ.ಮೀ. ಉದ್ದದಷ್ಟು 50 ಅಡಿ ಅಗಲದ ರ‍್ಯಾಯ ರಾಜಕಾಲುವೆ ನಿರ್ಮಿಸುತ್ತಿದ್ದು, ಇನ್ನು ಮುಂದೆ ಮಳೆ ಬಂದರೆ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲವೆಂದು ಶಾಸಕರು ನುಡಿದರು. ಅಷ್ಟೇ ಅಲ್ಲದೆ ರಾಜಕಾಲುವೆ ಇಕ್ಕೆಲಗಳಲ್ಲಿ ಸಸಿಗಳನ್ನು ನೆಟ್ಟು, ವಾಕಿಂಗ್ ಪಾಥ್ ನಿರ್ಮಾಣ ಮಾಡುವುದರಿಂದ ಪರಿಸರ ಸಂರಕ್ಷಣೆಯ ಜೊತೆಗೆ ಜನತೆಗೆ ಉತ್ತಮ ವಾತಾವರಣ ಕಲ್ಪಿಸಲಾಗುವುದೆಂದರು.

ಇದೇ ವೇಳೆ ರಾಜ್ಯ ರಾಜಕಾರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕರು, ಜನಾರ್ಧನ ರೆಡ್ಡಿಯವರ ಹೊಸ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ಅಪಾಯವಿಲ್ಲ. ಬಿಜೆಪಿ ಅತೀ ಹೆಚ್ಚು ಶಾಸಕರು, ಸಂಸದರು, ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿರುವಂತ ಪಕ್ಷವಾಗಿದೆ. ಯಾವುದೇ ಹೊಸ ಪಕ್ಷಗಳು ಪ್ರಾರಂಭವಾದಾಗ, ಅವುಗಳು ಕೆಳ ಹಂತದಿಂದ ಸಂಘಟನೆಗೊಳ್ಳಬೇಕು. ಗುಜರಾತ್‌ನಲ್ಲಿ ಅಮ್ ಆದ್ಮಿ ಪಕ್ಷದ ಗತಿ ಏನಾಯಿತು. ಹೊಸ ಪಕ್ಷ ಪ್ರಾರಂಭಗೊಂಡಾಗ ಅವರಿಗೆ ನಿರೀಕ್ಷೆಗಳು ಹೆಚ್ಚಿರುತ್ತದೆ. ಜನಾರ್ಧನ ರೆಡ್ಡಿಯವರು ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡವರು. ಅವರ ಸಹೋದರರು ಇನ್ನೂ ಬಿಜೆಪಿಯಲ್ಲಿಯೇ ಇದ್ದಾರೆ. ಕೇಂದ್ರ ಹಾಗೂ ರಾಜ್ಯದ ವರಿಷ್ಠರು ಇವೆಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಸರಿಪಡಿಸುತ್ತಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀನಿವಾಸ ರೆಡ್ಡಿ, ಬಿಜೆಪಿ ಯುವ ಮುಖಂಡ ಲಕ್ಷö್ಮಣ್ ರೆಡ್ಡಿ, ಬಿ.ಎಂ. ರಮೇಶ್, ಸಿಟಿಜನ್ ಫೋರಂ ಮುಖ್ಯಸ್ಥೆ ಡಾ. ಶಾಂತಿ, ಹೆಚ್.ಎಸ್.ಆರ್. ವೆಲ್‌ಫೇರಂ ಮುಖ್ಯಸ್ಥ ಚಂದ್ರಶೇಖರ್, ಬಿಬಿಎಂಪಿ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

 

 

Related