ಟ್ರಾಕ್ಟರ್‌ನಲ್ಲಿ ರಾಹುಲ್ ಸಂಸತ್‌ಗೆ

ಟ್ರಾಕ್ಟರ್‌ನಲ್ಲಿ ರಾಹುಲ್ ಸಂಸತ್‌ಗೆ

ನವದೆಹಲಿ : ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಟ್ರಾಕ್ಟರ್ ಚಲಾಯಿಸಿಕೊಂಡು ಸಂಸತ್ತಿಗೆ ತೆರಳಿದರು.

ಈ ವೇಳೆ ರಾಹುಲ್ ಗಾಂಧಿ, ಸಂಸದರಾದ ಪ್ರತಾಪ್ ಸಿಂಗ್ ಬಜ್ವಾ, ರವನೀತ್ ಸಿಂಗ್ ಬಿಟ್ಟು ಮತ್ತು ದೀಪಿಂದರ್ ಸಿಂಗ್ ಅವರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ವರದಿಗಾರರಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮರ‍್ನಾಲ್ಕು ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ದೇಶದ ಜನರಿಗೆ ಈ ಬಗ್ಗೆ ತಿಳಿದಿದೆ. ಇದು ರೈತರ ಅನೂಕೂಲಕ್ಕಾಗಿ ತರಲಾದ ಕಾನೂನುಗಳಲ್ಲ. ಹಾಗಾಗಿ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ನಾಯಕರುಗಳಾದ ರಣದೀಪ್ ಸುರ್ಜೇವಾಲಾ ಮತ್ತು ಯುವ ಕಾಂಗ್ರೆಸ್ ಮುಖ್ಯಸ್ಥ ಬಿ.ವಿ ಶ್ರೀನಿವಾಸ್ ಸೇರಿದಂತೆ ಹಲವರನ್ನು ಸಂಸತ್ತಿನ ಹೊರಗೆ ಬಂಧಿಸಿ, ಮಂದಿರ ಮಾರ್ಗ ಪೊಲೀಸ್ ಠಾಣೆಗೆ ದೆಹಲಿ ಪೊಲೀಸರು ಕರೆದುಕೊಂಡು ಹೋದರು.

ಈ ವೇಳೆ ಬಂಧಿತ ನಾಯಕರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಘೋಷಣೆಗಳನ್ನು ಕೂಗಿದರು. ಈ ರೀತಿಯ ಕ್ರಮಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಹೋರಾಟವನ್ನು ಮುಂದುವರಿಸುತ್ತೇವೆ. ದೇಶದ 62 ಕೋಟಿ ರೈತರ ಹಕ್ಕುಗಳನ್ನು ಮರ‍್ನಾಲ್ಕು ಕೈಗಾರಿಕೋದ್ಯಮಿಗಳ ಕೈಗೆ ನೀಡಲು ನಾವು ಮೋದಿ ಸರ್ಕಾರಕ್ಕೆ ಬಿಡುವುದಿಲ್ಲ ಎಂದು ಸುರ್ಜೇವಾಲಾ ಹೇಳಿದರು.

Related