ಅಧಿಕಾರಿಗಳ ನಿರ್ಲಕ್ಷ್ಯ ರೈತರಿಂದ ಪ್ರತಿಭಟನೆ

ಅಧಿಕಾರಿಗಳ ನಿರ್ಲಕ್ಷ್ಯ ರೈತರಿಂದ ಪ್ರತಿಭಟನೆ

ರಬಕವಿ-ಬನಹಟ್ಟಿ : ಜಿಲ್ಲೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ರೈತರ ಬಗ್ಗೆ ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ.

ರೈತರ ಕಬ್ಬಿನ ಬಿಲ್ ಪಾವತಿಸದೆ ನಾಲ್ಕು ವರ್ಷಗಳಾದರೂ ಯಾವುದೇ ರೀತಿಯ ಪರಿಹಾರ ಕೊಡಿಸಲಿಕ್ಕೆ ಅಧಿಕಾರಿಗಳು ಕ್ರಮತೆಗೆದುಕೊಳ್ಳುತ್ತಿಲ್ಲ. ರೈತರು ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ಜಿಲ್ಲೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಇದ್ದರೂ ಸಂಜೆಯಾದರೂ ಕೂಡಾ ಯಾವುದೇ ಅಧಿಕಾರಿಗಳು ರೈತರಿಗೆ ಸಮರ್ಪಕವಾದ ಉತ್ತರ ನೀಡದೆ ಇರುವುದು ಇವರ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ರೈತ ಮುಖಂಡ ಮುತ್ತಪ್ಪ ಕೋಮಾರ ತಿಳಿಸಿದರು.

ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ಹೋರಾಟ ನೀರತ ರೈತರನ್ನು ಉದ್ದೇಶಿಸಿ ಮಾತನಾಡಿ, ಮತ್ತೋರ್ವ ರೈತ ಮುಖಂಡ ಗಂಗಾಧರ ಮೇಟಿ, ನಾಲ್ಕು ವರ್ಷಗಳಿಂದ ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರು ಬಿಲ್‌ಗಾಗಿ ಹೋರಾಟ ಮಾಡುತ್ತಿದ್ದಾರೆ. ಅಂದಾಜು 900 ರೈತರ 22 ಕೋಟಿಯಷ್ಟು ಹಣ ಬರಬೇಕಾಗಿದೆ.

ಬಿಲ್ ಪಾವತಿಸುವ ವಿಷಯ ನ್ಯಾಯಾಲಯದಲ್ಲಿದೆ ಮತ್ತು ಸಕ್ಕರೆ ಕಾರ್ಖಾನೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಆದರೂ ಎರಡು ದಿನಗಳಿಂದ ಜನರು ಸಕ್ಕರೆ ಕಾರ್ಖಾನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಇದು ಕಾನೂನಿಗೆ ವಿರೋಧವಾಗಿದೆ. ಯಾವುದೇ ಪರವಾಣಿಗೆ ಇಲ್ಲದೆ ಸಕ್ಕರೆ ಕಾರ್ಖಾನೆಯನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು. ಸಕ್ಕರೆ ಕಾರ್ಖಾನೆಯನ್ನು ಸ್ವಚ್ಛಗೊಳಿಸುತ್ತಿರವವರ ಮಾಹಿತಿ ಅಧಿಕಾರಿಗಳಿಗೆ ಇದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ರೈತರಿಗೆ ಮಾಹಿತಿ ನೀಡಿಲ್ಲ ಎಂದರು.

ಈ ವೇಳೆ ಮತ್ತೋರ್ವ ಮುಖಂಡ ಶ್ರೀಕಾಂತ ಘೂಳನ್ನವರ ಮಾತನಾಡಿ, ಬಿಲ್ ಪಾವತಿಸುವಂತೆ ಈ ಭಾಗದ ರೈತರು ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಕಬ್ಬು ಪೂರೈಸಿದ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ.

ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಸಮರ್ಪಕ ಉತ್ತರ ನೀಡುವವರೆಗೂ ಅನಿರ್ದಿಷ್ಟ ಅವಧಿಯವರೆಗೆ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಎಸ್.ಬಿ ಕಾಂಬಳೆ, ಪ್ರತಿಭಟನೆಯಲ್ಲಿ ಹೊನ್ನಪ್ಪ ಬಿರಡಿ, ಭುಜಬಲಿ ಕೆಂಗಾಲಿ, ಶಿಪಪ್ಪ ಹೋಟಕಾರ, ಮಗೆಪ್ಪ ತೇರದಾಳ, ಅರವಿಂದ ದಳವಾಯಿ, ಬಸು ಮಲೋಡಿ, ಮಾಯಪ್ಪ ತುರಾದಿ, ಸಿಪಿಐ ಜೆ.ಕರುಣೇಶಗೌಡ, ಬನಹಟ್ಟಿ ಪಿಎಸ್‌ಐ ಸುರೇಶ ಮಂಟೂರ ಸೇರಿದಂತೆ ಮಹಾಲಿಂಗಪುರ, ತೇರದಾಳ, ಸಾವಳಗಿ ಪಿಎಸ್‌ಐ ಇದ್ದರು.

Related