ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಜೇವರ್ಗಿ : ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಹಾಗೂ ಶಾಸಕ ಡಾ.ಅಜಯ್ ಸಿಂಗ್ ಅವರ ಸ್ವ ಗ್ರಾಮವಾದ ನೆಲೋಗಿಯಲ್ಲಿ ರೈತರಿಗೆ ಅನ್ಯಾಯ, ಸಮೀಕ್ಷೆ ಮಾಡದೆ ವರದಿ, ಬೆಳೆ ಹಾನಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸೋಮವಾರ ನೆಲೋಗಿ ಗ್ರಾಮದ ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.

ಅಧಿಕ ಮಳೆಯಿಂದ ಹಾಗೂ ಮೋಡ ಕವಿದ ವಾತಾವರಣದಿಂದ ಹತ್ತಿ, ತೊಗರಿ ಬೆಳೆಗಳು ಹಾಳಾಗಿದ್ದು ಅಧಿಕಾರಿಗಳು ಯಾವುದೇ ಸಮೀಕ್ಷೆ ಮಾಡದೆ ನೆಲೋಗಿ ಹೋಬಳಿಯ ಆವೃತ್ತಿಯಲ್ಲಿ ಯಾವುದೇ ರೀತಿಯ ಬೆಳೆ ಹಾನಿ ಆಗಿಲ್ಲ ಎಂದು ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಬ್ಯಾಕೊಡ ಅವರು ಸುಳ್ಳು ವರದಿ ನೀಡಿದ್ದಾರೆಂದು ದೇವು ಮುದ್ದು ಅವರು ದೂರಿದ್ದಾರೆ.

2020-21 ಮತ್ತು 2021-22ನೇ ಸಾಲಿನ ಅತಿವೃಷ್ಟಿಯಿಂದ ಹಾನಿಯಾದ ಬೆಳೆ ಹಾನಿ ಪರಿಹಾರ ಇದುವರೆಗೂ ಈ ಭಾಗದ ರೈತರಿಗೆ ಬಂದಿಲ್ಲ, ಬೇರೆ ಹೋಬಳಿಗಳಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ಲಕ್ಷ್ಯ ತೋರದೆ ಕೆಲಸ ಮಾಡಿದರೆ ನೆಲೋಗಿ ಹೋಬಳಿಯ ಅಧಿಕಾರಿಗಳು ಕರ್ತವ್ಯ ದ್ರೋಹ ಬಗೆದು ರೈತರಿಗೆ ಬೆಳೆ ಪರಿಹಾರ ಭಾರದಂತೆ ಮಾಡಿದ್ದಾರೆ ಎಂದು ತಾಲೂಕು ದಂಡಾಧಿಕಾರಿ ವಿನಯಕುಮಾರ್ ಪಾಟೀಲ್ ಅವರ ಎದುರು ರೈತರು ಕಣ್ಣೀರಿತ್ತರು.

ರೈತರ ಆಕ್ರೋಶಕ್ಕೆ ಮಣಿದ ಕೃಷಿ ಅಧಿಕಾರಿ: ಬಿಳಿ ಹಾಳೆ ಮೇಲೆ ಸಹಿ ನೆಲೋಗಿ ಹೋಬಳಿಯ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್ ಬ್ಯಾಕೂಡ ಸಾಯಂಕಾಲ 8 ಗಂಟೆಯ ವರೆಗೆ ಅತಿವೃಷ್ಟಿಯಿಂದ ಹಾಳಾದ ಬೆಳೆ ಹಾನಿಯಾದ ವರದಿಯು ತಾಲೂಕು ದಂಡಾಧಿಕಾರಿಗಳಿಗೆ ನೀಡುವುದಾಗಿ ಗ್ರಾಮದ ರೈತರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಬಿಳಿ ಹಾಳೆಯ ಮೇಲೆ ಬರೆದು ಕೊಟ್ಟರು.

ಈ ಸಂದರ್ಭದಲ್ಲಿ ವಿನೋದ ಭಾಸಗಿ ಬಳ್ಳುಂಡಗಿ, ಶಿವಾನಂದ ಮಲ್ಲದ್ ಕಲ್ಲೂರ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Related