ಉತ್ತಮ ನಾಯಕರಾಗಲು ರಾಜಕೀಯ ವಿಜ್ಞಾನ ಅತ್ಯಗತ್ಯ : ಡಾ.ನಾರಾಯಣಪ್ಪ ಎನ್.ಕೆ.

ಉತ್ತಮ ನಾಯಕರಾಗಲು ರಾಜಕೀಯ ವಿಜ್ಞಾನ ಅತ್ಯಗತ್ಯ : ಡಾ.ನಾರಾಯಣಪ್ಪ ಎನ್.ಕೆ.

ಬೆಂಗಳೂರು: ದೇಶದಲ್ಲಿ ಉತ್ತಮ ನಾಗರಿಕ ಹಾಗೂ ಉತ್ತಮ ನಾಯಕರಾಗಬೇಕೆಂದರೆ ರಾಜಕೀಯ ವಿಜ್ಞಾನ ಅತ್ಯಗತ್ಯವಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಾಪಕರ ಅಕಾಡೆಮಿ ಅಧ್ಯಕ್ಷ ಡಾ.ನಾರಾಯಣಪ್ಪ ಎನ್.ಕೆ ಹೇಳಿದರು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂ.ನಗರ ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಾಪಕರ ಅಕಾಡೆಮಿ ಹಾಗೂ ಬೆಂವಿವಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ‘ಎನ್‌ಇಪಿ ಪಠ್ಯಯಕ್ರಮದನ್ವಯ ಆರನೇ ಸೆಮಿಸ್ಟರ್ ರಾಜ್ಯಶಾಸ್ತ್ರ ಪತ್ರಿಕೆ’ಗಳ ಕುರಿತು ನಡೆದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ರಾಜಕೀಯ ವಿಜ್ಞಾನ ಅಭಿವೃದ್ಧಿ ಹೊಂದಿದಾಗ ದೇಶದಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ರಾಜಕೀಯ ವಿಜ್ಞಾನದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಾಗ ಮಾತ್ರ, ಸ್ಥಳೀಯವಾಗಿ ಮತ್ತು ಜಾಗತಿಕವಾಗಿ, ಅಂತರರಾಷ್ಟ್ರೀಯ ಸಂಬಂಧಗಳು, ಸಾರ್ವಜನಿಕ ನೀತಿ, ಕಾನೂನು ವ್ಯವಸ್ಥೆಗಳು, ಮಾನವ ಹಕ್ಕುಗಳು ಮತ್ತು ಆರ್ಥಿಕ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡುವುದು ವಿದ್ಯಾರ್ಥಿಗಳಿಗೆ ರಾಜಕೀಯ ಭಾಗವಹಿಸುವಿಕೆಯ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ಅವರ ಸಮುದಾಯಗಳು ಮತ್ತು ರಾಷ್ಟ್ರದ ರಾಜಕೀಯ ಜೀವನದಲ್ಲಿ ಪಾಲ್ಗೊಳ್ಳಲು ಅವರನ್ನು ಸಿದ್ಧಪಡಿಸುತ್ತದೆ ಎಂದು ನಾರಾಯಣಪ್ಪ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕುಲಸಚಿವ(ಮೌಲ್ಯಮಾಪನ) ಡಾ.ಆನಂದಕುಮಾರ್ ಸಿ.ಎಸ್. ಮಾತನಾಡಿ, ರಾಜ್ಯಶಾಸ್ತ್ರ ವಿಭಾಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸುವ ಅನಿವಾರ್ಯ ಬಂದಿದೆ. ದೇಶದ ರಾಜಕೀಯ ಬದಲಾವಣೆಯಲ್ಲಿ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ. ಮುಂದಿನ ವರ್ಷದಿಂದ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಹೆಚ್ಚಿನ ಸಂಶೋಧನಾ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಬೆಂವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ವೈ.ಸುರೇಂದ್ರ ಕುಮಾರ್, ತುಮಕೂರು ವಿವಿ ರಾಜ್ಯಶಾಸ್ತç ವಿಭಾಗ ಮುಖ್ಯಸ್ಥ ಡಾ.ಬಸವರಾಜು ಜಿ, ಸರಕಾರಿ ಕಲಾ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ವನಜಾ, ವಿಶ್ವಭಾರತಿ ಸಮೂಹ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಪುಟ್ಟಸ್ವಾಮಿ ಹಾಗೂ ರಾಜ್ಯಶಾಸ್ತç ಬಿಓಈ ಸದಸ್ಯರಾದ ಶಿವಲಿಂಗಯ್ಯ, ಚಂದ್ರಶೇಖರ್, ಡಾ.ಅರುಣಾಕುಮಾರಿ ಎಸ್.ಕೆ ಹಾಗೂ ಅಧ್ಯಪಕ ಲಕ್ಷ್ಮಿ ಮನಾರಯಣರೆಡ್ಡಿ ಉಪಸ್ಥಿತರಿದ್ದರು.

 

Related