ಮೇಲ್ಸೇತುವೆ ಕೆಳಗೆ ಕಾಡಾನೆ, ಹುಲಿ

ಮೇಲ್ಸೇತುವೆ ಕೆಳಗೆ ಕಾಡಾನೆ, ಹುಲಿ

ಬೆಂಗಳೂರು, ಫೆ. 6 : ಹುಲಿರಾಯನ ಗಂಭೀರ ನೋಟ, ಮರಿ ಆನೆಯೊಂದಿಗೆ ದೃಢವಾಗಿ ನಿಂತಿರುವ ಬೃಹತ್ ತಾಯಿ ಆನೆ, ಪೊದೆಯಿಂದ ಹೊರಬರುತ್ತಿರುವ ಹುಲಿ ಇದೆಲ್ಲಾ ಬೆಂಗಳೂರಲ್ಲೇ ನೀವು ಕಾಣಬಹುದು.

ಹೌದು. ಸಿಲಿಕಾನ್ ಸಿಟಿಯಲ್ಲಿ ರಾಜ್ಯ ವನ್ಯ ಸಂಪತ್ತಿನ ಅನಾವರಣವಾಗಿದೆ. ರಾಜ್ಯದ ಹೆಮ್ಮೆಯ ವನ್ಯಜೀವಿಗಳಾದ ಹುಲಿ, ಆನೆಯ ಬೃಹತ್ ಪ್ರತಿಕೃತಿಗಳನ್ನು ತಯಾರಿಸಿ, ನಗರದ ಮೇಲ್ಸೇತುವೆಯ ಅಡಿಭಾಗವನ್ನು ಸುಂದರವಾದ ವನ್ಯಜೀವಿ ತಾಣವಾಗಿ ಬದಲಾಯಿಸಲಾಗಿದೆ. ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಬರುವ ವೀರನಪಾಳ್ಯ ಸರ್ಕಲ್‍ನಲ್ಲಿ ಸುಮಾರು ಐದು ಸಾವಿರ ಕೆ.ಜಿ ಕಬ್ಬಿಣ ಬಳಸಿ ಈ ಪ್ರಾಣಿ ಪ್ರತಿಕೃತಿಗಳನ್ನು ಮಾಡಲಾಗಿದೆ.

ವಾಹನ ಸವಾರರಿಗೆ ಚಲಿಸುವ ರೀತಿಯಲ್ಲಿ ಕಾಣುವಂತೆ, ಬಳಿಕ ಮಾಯವಾಗುವಂತೆ ಭಾಸವಾಗುವ ರೀತಿಯ ವಿಶಿಷ್ಟ ವಿನ್ಯಾಸದಲ್ಲಿ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಫ್ಲೈಓವರ್ ಮೇಲ್ಭಾಗವನ್ನು ಸಹ ಕಂದು ಬಿಳಿ ಬಣ್ಣದ ಡಿಸೈನ್ ಮಾಡಲಾಗಿದೆ. ವೈಲ್ಡ್ ಕರ್ನಾಟಕ ಸಿನಿಮಾದಿಂದ ಪ್ರೇರೇಪಿತರಾಗಿ, ಎಲ್ ಆಂಡ್ ಟಿ ಟೆಕ್ನಾಲಜಿ ಸಂಸ್ಥೆ, ಇಂಡಿಯಾ ರೈಸಿಂಗ್ ಟ್ರಸ್ಟ್, ಅಗ್ಲಿ ಇಂಡಿಯನ್ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಈ ವೃತ್ತವನ್ನು ಅಭಿವೃದ್ಧಿ ಮಾಡಲಾಗಿದೆ.

ಎಲ್ಲಾ ಮೇಲ್ಸೇತುವೆಯಂತೆ ಧೂಳು, ಕಸದ ರಾಶಿಯಿಂದ ತುಂಬಿ ಹೋಗಿದ್ದ ಈ ರಸ್ತೆಯನ್ನು ಸ್ವಚ್ಛ ಮಾಡಿ, ಬಣ್ಣ ಮಾಡಲಾಗಿದೆ. ಪ್ಲಾಸ್ಟಿಕ್ ಮರುಬಳಕೆಯಿಂದ ಮಾಡಿದ ಕುರ್ಚಿಗಳು, ಕಾರ್ಬನ್ ಸ್ಟೋನ್‍ಗಳನ್ನು ಬಳಸಿ ಪ್ರಯಾಣಿಕರು, ಪಾದಾಚಾರಿಗಳು ಕುಳಿತು ಮಾತನಾಡಲು, ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ರಾಜ್ಯದ ವನ್ಯ ಸಂಪತ್ತಿನ ವಿವರಣೆಯನ್ನೂ ಅಲ್ಲಲ್ಲಿ ಬರೆಯಲಾಗಿದೆ. ಒಟ್ಟು 17 ತಿಂಗಳಲ್ಲಿ ಈ ಪ್ರಾಜೆಕ್ಟ್ ತಯಾರಿಸಲಾಗಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು.

ಇದೊಂದೆ ಅಲ್ಲ ನಗರದ 36 ಮೇಲ್ಸೆತುವೆಗಳ ಅಡಿಭಾಗವನ್ನು ಈ ರೀತಿಯಲ್ಲಿ ಅಭಿವೃದ್ಧಿ ಮಾಡಲು ಪಾಲಿಕೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಚಿಂತನೆ ನಡೆಸಿವೆ. ಸದ್ಯ ಅದ್ಧೂರಿಯಾಗಿ ಕಂಗೊಳಿಸ್ತಿರೋ ವೀರನಪಾಳ್ಯ ವೃತ್ತ ಪ್ರಯಾಣಿಕರನ್ನು ತಿರುಗಿ ನೋಡುವಂತೆ ಕಣ್ಮನ ಸೆಳೆಯುತ್ತಿದೆ.

 

Related