ಯಾದಗಿರಿ: ರಾಜ್ಯ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಾಂಗ್ರೆಸ್ ನಾಯಕರುಗಳ ಮೇಲೆ ಜೆಡಿಎಸ್ ಮತ್ತು ಬಿಜೆಪಿ ನಾಯಕರುಗಳು ಆರೋಪ ಮಾಡುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಕಾಂಗ್ರೆಸ್ ನಾಯಕರುಗಳೇ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪಗಳನ್ನು ಜೆಡಿಎಸ್ ನಾಯಕರುಗಳು ಮಾಡುತ್ತಿದ್ದಾರೆ. ಇನ್ನು ಇದಕ್ಕೆ ಪ್ರತ್ಯುತ್ತರವಾಗಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರು ಡಿಕೆ ಶಿವಕುಮಾರ್ ಅವರ ಮಾತು ಕೇಳಿ ಅಶ್ಲೀಲ ವಿಡಿಯೋ ಮಾಡಿಕೊಂಡ್ರಾ? ಜೆಡಿಎಸ್ – ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಜತೆ ರಾಸಲೀಲೆ ನಡೆಸಿದ ವಿಡಿಯೋ ಇದ್ದ ಪೆನ್ಡ್ರೈವ್ ಬಿಡುಗಡೆಯ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ರೇವಣ್ಣ ವಿಡಿಯೋ ರೆಕಾರ್ಡ್ ಮಾಡಿಕೊಂಡು ಈಗ ಬೇರೆಯವರ ಮೇಲೆ ಹಾಕುತ್ತಿದ್ದಾರೆ. ಈ ವಿಡಿಯೋ ಬಿಡುಗಡೆ ಮಾಡಿದವರು ಯಾರು? ಎಷ್ಟು ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ದಾರೆ? ನೇಹಾ ಹಿರೇಮಠ ಕೊಲೆಯಾದಾಗ ಬಿಜೆಪಿ ಮತ್ತು ಜೆಡಿಎಸ್ನವರು ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಎಂದರು. ಈಗ ಬಿಜೆಪಿ, ಜೆಡಿಎಸ್ನವರು ಎಲ್ಲಿದ್ದಾರೆ? ಪ್ರಜ್ವಲ್ನನ್ನು ಎನ್ಕೌಂಟರ್ ಮಾಡಿ ಅಂತ ಯಾಕೆ ಹೇಳುತ್ತಿಲ್ಲ? ಸಾಮಾನ್ಯ ಜನರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯನಾ? ಎಂದು ಪ್ರಶ್ನಿಸಿದರು.