ಹೊರಗಿನವರಿಗೆ ಈ ಬಾರಿ ಮಣೆ ಹಾಕಲ್ಲ

ಹೊರಗಿನವರಿಗೆ ಈ ಬಾರಿ ಮಣೆ ಹಾಕಲ್ಲ

ಹಾನಗಲ್  : ಹಾನಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಗಟ್ಟಿ ನಾಯಕರಿದ್ದು, ಜಿದ್ದಿನಿಂದ ಗೆಲ್ಲುವ ಸಮರ್ಥ ಅಭ್ಯರ್ಥಿಗಳಿರುವಾಗ ಹೊರಗಿನವರಿಗೆ ಮಣೆ ಹಾಕಲು ಈ ಬಾರಿ ಬಿಡುವುದಿಲ್ಲ. ಹೊರಗಿನವರೇ ಗೋ ಬ್ಯಾಕ್ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್ ತಿಳಿಸಿದರು.

ಹಾನಗಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಹವಾಲು ಕೇಳುವ ಸಮಯವೇ ಮೀರಿ ಹೋಗಿದ್ದರಿಂದ ಅನಿವಾರ್ಯವಾಗಿ ಹೈಕಮಾಂಡ್ ನಿರ್ದೇಶಿಸಿದವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ನಿಷ್ಠೆಯಿಂದ ಯತ್ನಿಸಿದ್ದೇವೆ.

ಆ ಸಂದರ್ಭದಲ್ಲಿ ಈ ಕ್ಷೇತ್ರದವರಿಗೆ ಅಭ್ಯರ್ಥಿ ಮಾಡಿದ್ದರೆ ಗೆಲುವು ನಮ್ಮದೇ ಆಗಿತ್ತು. ಈಗ ಕಾಲ ಮಿಂಚಿ ಹೋಗಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಹಾನಗಲ್ ಮತಕ್ಷೇತ್ರದ ಯಾರಿಗೇ ಅಭ್ಯರ್ಥಿ ಮಾಡಿದರೂ ಒಟ್ಟಾಗಿ ದುಡಿದು ಗೆಲ್ಲಿಸುತ್ತೇವೆ. ಹೊರಗಿನವರು ಇಲ್ಲಿ ನೆಲೆಯೂರಲು ಬಿಡುವುದಿಲ್ಲ. ಮತ್ತೆ ಅವಕಾಶ ವಂಚಿತರಾಗಲು ನಾವು ಸಿದ್ಧರಿಲ್ಲ ಎಂದು ಕಿಡಿಕಾರಿದರು.

ಈ ಕ್ಷೇತ್ರದಲ್ಲಿ ಸಮರ್ಥ ನಾಯಕರಿದ್ದಾರೆ.  ಹೀಗಿರುವಾಗ  ಹೊರಗಿನವರ  ಹೇರಿಕೆ  ಸಲ್ಲದು. ಈ ಬಾರಿ  ಈಗಿನಿಂದಲೇ  ಸಿದ್ಧತೆ  ಮಾಡಿಕೊಂಡು ಸ್ಥಳಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಒಗ್ಗಟ್ಟು ಕಾಂಗ್ರೆಸ್ ಪಕ್ಷದ್ದಾಗಿದೆ. ನಮ್ಮ ಸಂಕಲ್ಪಕ್ಕೆ ಹೈಕಮಾಂಡ್ ಈಗಾಗಲೇ ಹಸಿರು ನಿಶಾನೆ ತೋರಿದೆ ಅವರಿಗೂ ಮನವರಿಕೆಯಾಗಿದೆ.

ಈಗ ಎಲ್ಲ ಅಪಸ್ವರಗಳನ್ನು ತಿದ್ದಿಕೊಂಡು ಚುನಾವಣೆ ಗೆಲ್ಲುತ್ತೇವೆ. ಸ್ಥಳೀಯರು ಈ ಬಾರಿ ಅವಕಾಶ  ವಂಚಿತರಾಗದಂತೆ  ನೋಡಿಕೊಳ್ಳುತ್ತೇವೆ.  5 ವರ್ಷಕ್ಕೊಮ್ಮೆ ಸಿಗುವ ಈ ಅವಕಾಶ ಇಲ್ಲಿ ಪಕ್ಷಕ್ಕಾಗಿ ಶ್ರಮಿಸಿದವರಿಗೆ ಲಭಿಸಬೇಕು ಎಂದರು.

ಹಾನಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿಯಾಗಿ  ಹೊರಗಿನವರನ್ನು  ದತ್ತು ತೆಗೆದುಕೊಳ್ಳುವಷ್ಟು ನಾವು ದುರ್ಬಲರಲ್ಲ. ಹೇಡಿಗಳೂ ಅಲ್ಲ. ಎಲ್ಲ ಚುನಾವಣೆಗಳಲ್ಲಿ ಸಮರ್ಥವಾಗಿ ನಮ್ಮ ಅಸ್ತಿತ್ವವನ್ನು ಬಿಂಬಿಸಿದ್ದೇವೆ. ನಮ್ಮ ಸೌಜನ್ಯವನ್ನು  ದುರುಪಯೋಗ ಮಾಡಿಕೊಳ್ಳಲು ಈ ಬಾರಿ ಅವಕಾಶ ಕೊಡುವುದಿಲ್ಲ ನಮ್ಮ ಹೋರಾಟ ರಾಷ್ಟಮಟ್ಟದವರೆಗೂ ನಡೆಯುತ್ತದೆ. ಅನಿವಾರ್ಯವಾದರೆ ಹೊರಗಿನವರಿಗೆ ಗೋಬ್ಯಾಕ್ ಚಳುವಳಿಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

 

Related