ನೇತ್ರ ತಪಾಸಣೆ ಶಸ್ತ್ರ ಚಿಕಿತ್ಸೆಯೂ ಉಚಿತ

ನೇತ್ರ ತಪಾಸಣೆ ಶಸ್ತ್ರ ಚಿಕಿತ್ಸೆಯೂ ಉಚಿತ

ದೇವನಹಳ್ಳಿ: ರೋಟರಿ ವತಿಯಿಂದ ನೇತ್ರ ತಪಾಸಣಾ ಶಿಬಿರ ನಿರಂತರವಾಗಿ ನಡೆಯುತ್ತಿದ್ದು, ಲಕ್ಷಾಂತರ ಮಂದಿ ಇದರ ಸದುಪಯೋಗ ಪಡೆದಿದ್ದಾರೆ. ರೋಟರಿಯೊಂದಿಗೆ ಸುಮಾರು 48 ವರ್ಷಗಳಿಂದ ಸಹಯೋಗ ನೀಡುತ್ತಿರುವ ಬೆಂಗಳೂರಿನ ಶಾರದಾ ಐ ಕ್ಲಿನಿಕ್ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ ಎಂದು ಸೋಮವಾರ ವಿಜಯಪುರ ರೋಟರಿ ಅಧ್ಯಕ್ಷೆ ಅನಸೂಯಮ್ಮ ಸಂಪತ್ ತಿಳಿಸಿದರು.
ರೋಟರಿ ಶಾಲಾ ಆವರಣದಲ್ಲಿ ವಿಜಯಪುರ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ, ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಕಳೆದ ಬಾರಿ ಹಮ್ಮಿಕೊಂಡಿದ್ದ ನೇತ್ರ ತಪಾಸಣಾ ಶಿಬಿರದಲ್ಲಿ 100 ಮಂದಿ ತಪಾಸಣೆ ಮಾಡಿಸಿಕೊಂಡಿದ್ದು, ಅದರಲ್ಲಿ 28 ಜನರು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ನೀಡಿದ ಸೂಚನೆಯ ಮೇರೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಶಿಬಿರದಲ್ಲಿ ಅವರು ವೈದ್ಯರನ್ನು ಭೇಟಿ ಮಾಡಿದ್ದು, ಯಾವುದೇ ಸಮಸ್ಯೆ ಇಲ್ಲ. ಈ ಬಾರಿಯ ಶಿಬಿರದಲ್ಲಿ 40 ಕ್ಕೂ ಮೇಲ್ಪಟ್ಟು ತಪಾಸಣೆಗೆ ನೋಂದಾಯಿಸಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಸೂಚಿಸಿದವರಿಗೆ ರೋಟರಿ ವತಿಯಿಂದ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸುತ್ತೇವೆ. ಶಿಬಿರದ ದಿನದಂದೇ ಉಚಿತ ವಾಹನ ಸೌಲಭ್ಯ ಕಲ್ಪಿಸಿ ಶಸ್ತ್ರ ಚಿಕಿತ್ಸೆ ಗೆ ಒಳಗಾದವರನ್ನು ಬೆಂಗಳೂರಿನ ಶಾರದಾ ಐ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಮೂರು ದಿನಗಳ ನಂತರ ವಾಹನದಲ್ಲಿ ಇಲ್ಲಿಗೆ ಕರೆದುಕೊಂಡು ಬರಲಾಗುತ್ತದೆ. ಎಲ್ಲಾ ಪ್ರಕ್ರಿಯೆ ರೋಟರಿ ವತಿಯಿಂದ ಉಚಿತವಾಗಿ ಇರುತ್ತದೆ ಎಂದು ಹೇಳಿದರು.
ರೋಟರಿ ವಿಜಯಪುರ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ. ಸಿ.ಸಿದ್ಧರಾಜು, ಪುಟ್ಟರಾಜು, ಸೂರ್ಯಪ್ರಕಾಶ್ ಇನ್ನಿತ್ತರಿದ್ದರು.

Related