ಡಿಸಿಎಂ ತವರಿನಲ್ಲಿ ಹಾಡಹಗಲೇ ಕೊಲೆ

ಡಿಸಿಎಂ ತವರಿನಲ್ಲಿ ಹಾಡಹಗಲೇ ಕೊಲೆ

ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹಾಡಹಗಲೇ ಚಾಕು ಇರಿತ, ಕೊಲೆ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಲೇ ಸಾಗಿದ್ದು ಜನತೆ ಆತಂಕಗೊಂಡಿದ್ದಾರೆ.

ದಶಕಗಳ ಹಿಂದೆ ಸ್ಪಿರೀಟ್ ಕಿಂಗ್ ಎಂದೇ ಕುಖ್ಯಾತಿ ಪಡೆದಿದ್ದ ರೌಡಿಶೀಟರ್ ರಮೇಶ ಭಾಂಡಗೆ (52) ಎಂಬುವನನ್ನು ಬುಧವಾರ ಹಾಡಹಗಲೇ ಚಾಕುವಿನಿಂದ ಇರಿದು ಕೊಲೆಗೈಯಲಾಗಿದ್ದು, ಇಡೀ ಹು-ಧಾ ಕಮೀಷ್ನರೇಟ್‍ನಲ್ಲಿ ಪೊಲೀಸ್ ವ್ಯವಸ್ಥೆ ಅತ್ಯಂತ ನಿಷ್ಕ್ರಿಯವಾಗಿದೆ ಎಂಬುದನ್ನು ಸಾರಿ ಹೇಳುವಂತಿದೆ.

ಬುಧವಾರ ಹಾಡಹಗಲೇ ಕೊಲೆಯಾದ ರಮೇಶ ಭಾಂಡಗೆ ಬಾಬಾಸಾನ ಗಲ್ಲಿಯಲ್ಲಿರುವ ಕಟಿಂಗ್ ಶಾಪ್‍ಗೆ ತೆರಳಿದ್ದ. ಅಲ್ಲಿಯೇ ಆತನನ್ನು ಫೀನಿಶ್ ಮಾಡಲು ಹೊಂಚು ಹಾಕಿ ಕುಳಿತಿದ್ದ ಕೊಲೆಗಡಕರು, ಕಟಿಂಗ್ ಮುಗಿಸಿಕೊಂಡು ಹೊರ ಬರುತ್ತಿದ್ದಂತೆಯೇ, ಆತನ ಮೇಲೆ ಮೂರು ಬಾರಿ ಚಾಕುವಿನಿಂದ ಇರಿದಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ರಮೇಶನನ್ನು ಸ್ಥಳೀಯರು ಪೊಲೀಸರ ಸಹಾಯದಿಂದ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ರಮೇಶ ಆಸ್ಪತ್ರೆ ಸೇರುವ ಮುನ್ನವೇ ಅಸುನೀಗಿದ್ದಾನೆ. ರಮೇಶನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಅತಿ ಸೂಕ್ಷ್ಮ ಹಣೆಪಟ್ಟಿ
ತೊಂಬತ್ತರ ದಶಕದಲ್ಲಿ ದೇಶದಲ್ಲೇ ಅತ್ಯಂತ ಸೂಕ್ತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರದ ಪೊಲೀಸ್ ಕಮೀಷ್ನರಾಗಿ ಕೆ.ವಿ. ಗಗನದೀಪ ಹಾಗೂ ಡಿಸಿಪಿ ಬಿ.ಆರ್. ರವಿಕಾಂತೇಗೌಡ ಆಗಮಿಸಿದ ನಂತರ, ಅಕ್ರಮ ಕುಳಗಳು ಸೇರಿದಂತೆ ನಟೋರಿಯಸ್‍ಗಳಿಗೆ ದುಸ್ವಪ್ನವಾಗಿ ಕಾಡಿದ ಪರಿಣಾಮ ಅವಳಿನಗರದಲ್ಲಿ ಶಾಂತಿ ಸುವ್ಯವಸ್ಥೆ ನೆಲಗೊಂಡಿತ್ತಲ್ಲದೇ, ಕೋಮು ಸೌಹಾರ್ದತೆಯ ಭಾವ ಮೂಡಿತ್ತು.

ಕೋಮು ದಳ್ಳುರಿಯಿಂದ ನಲುಗಿದ್ದ ಮಹಾನಗರದಲ್ಲಿ ಶಾಂತಿ ಕಾಪಾಡಿಕೊಂಡು ಬರಲು ಮೂರುಸಾವಿರ ಮಠದ ಆಗಿನ ಜಗದ್ಗುರುಗಳಾಗಿದ್ದ ಲಿಂ. ಗಂಗಾಧರ ರಾಜಯೋಗೇಂದ್ರ ಶ್ರೀಗಳು ನಡೆಸಿದ್ದ ಸೌಹಾರ್ಧ ಸಭೆ ಕೊನೆಗೂ ಫಲ ನೀಡಿತ್ತು.

ಪರೋಪಕಾರ…
ಸ್ಪಿರೀಟ್ ಕಿಂಗ್‍ಪಿನ್ ಎಂದೇ ಕುಖ್ಯಾತಿ ಪಡೆದಿದ್ದ ಹತ್ಯೆಯಾದ ರಮೇಶ ಭಾಂಡಗೆ, ಕೋರ್ಟ್‍ನಲ್ಲಿ ತನ್ನ ವಿರುದ್ಧವಿದ್ದ ಎಲ್ಲ ಪ್ರಕರಣಗಳಲ್ಲಿ ಖುಲಾಸೆಯಾಗಿ ಬಡಬಗ್ಗರಿಗೆ ಸಹಾಯ ಹಸ್ತ ಚಾಚುವ ಮೂಲಕ ಹೆಗ್ಗಳಿಕೆಗೂ ಪಾತ್ರನಾಗಿದ್ದ.

ಭೂಗಳ್ಳರೇ ಮುಳುವಾದರೇ..?
ಇದೀಗ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಹತ ರಮೇಶ, ಆರ್‍ಟಿಐ ಕಾರ್ಯಕರ್ತನೂ ಆಗಿದ್ದ. ಸರ್ಕಾರಿ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿದ್ದವರ ವಿರುದ್ಧ ಸಮರವೂ ಸಾರಿದ್ದ. ಸರ್ಕಾರಿ ಜಾಗೆ ಅತಿಕ್ರಮಣ ಮಾಡಿದವರ ಪೈಕಿ ನಗರದ ಗಣ್ಯ ವ್ಯಕ್ತಿಗಳು ಇದ್ದಾರೆ ಎಂಬ ಮಾಹಿತಿಯನ್ನು ಪತ್ರದ ಮೂಲಕ ಲೋಕಾಯುಕ್ತಕ್ಕೂ ತಿಳಿಸಿದ್ದ.

ಬೆದರಿಕೆ ಕರೆ
ಇದರಿಂದಾಗಿ ಅನೇಕ ಪ್ರಭಾವಿಗಳನ್ನು ಎದುರು ಹಾಕಿಕೊಂಡಿದ್ದ ರಮೇಶನಿಗೆ ಅನೇಕ ರೀತಿಯ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು ಎಂದು ಆತನ ನಿಕಟ ವರ್ತಿಗಳು `ಪ್ರಜಾ ವಾಹಿನಿ’ ಗೆ ತಿಳಿಸಿದ್ದಾರೆ.

ದುಷ್ಕರ್ಮಿಗಳಿಂದ ಬಂದ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಕೊಲೆಯಾದ ರಮೇಶ, ತಾನು ವಾಸವಾಗಿದ್ದ ಕಮರಿಪೇಟೆ ಮನೆಯ ಸುತ್ತಲೂ 8 ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದ. ನಗರದ ಬಿಡ್ನಾಳ, ಹಳೇಹುಬ್ಬಳ್ಳಿ ಭಾಗದಲ್ಲಿ ಒತ್ತುವರಿಯಾಗಿದ್ದ ಜಾಗೆಗಳ ಬಗ್ಗೆ ಇತ್ತೀಚಿಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದ ಎಂದು ಗೊತ್ತಾಗಿದೆ. ಇದೇ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಸಂಶಯ ವ್ಯಕ್ತವಾಗುತ್ತಿದೆಯಾದರೂ, ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

Related