ಸಮಾಲೋಚನಾ ಸಭೆ ನಡೆಸಿದ ಸಚಿವ ನಾರಾಯಣ ಗೌಡ

ಸಮಾಲೋಚನಾ ಸಭೆ ನಡೆಸಿದ ಸಚಿವ ನಾರಾಯಣ ಗೌಡ

ಕೃಷ್ಣರಾಜಪೇಟೆ: ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಕೊರೋನಾ ವೈರಾಣು ಹರಡುವಿಕೆ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಾಲೋಚನಾ ಸಭೆ ನಡೆಯಿತು

ಕೊರೋನಾ ಸೋಂಕು ಪತ್ತೆಯಾಗಿ ಸೀಲ್ ಡೌನ್ ಆಗಿರುವ ತಾಲ್ಲೂಕಿನ ಜಾಗಿನಕೆರೆ ಮತ್ತು ರಾಜಘಟ್ಟ ಗ್ರಾಮಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಮಾಹಿತಿಯನ್ನು ತಹಶೀಲ್ದಾರ್ ಶಿವಮೂರ್ತಿ ಮತ್ತು ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಅವರಿಂದ ಪಡೆದುಕೊಂಡರು.

ಕೃಷ್ಣರಾಜಪೇಟೆ ತಾಲ್ಲೂಕಿಗೆ ಮುಂಬೈ ಸೇರಿದಂತೆ ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯದಿಂದ ಆಗಮಿಸಿರುವ ಸಾರ್ವಜನಿಕರ ಮಾಹಿತಿಯನ್ನು ಸಂಗ್ರಹಿಸಲು ಶಿಕ್ಷಕರನ್ನು ನಿಯೋಜಿಸಲಾಗಿದ್ದು 50 ವರ್ಷ ಮೀರಿರುವವರು ಹಾಗೂ ಮಹಿಳೆಯರನ್ನು ಹೊರತುಪಡಿಸಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂಬ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಮೇಗೌಡರ ಮನವಿಗೆ ಸ್ಪಂದಿಸಿದ ಸಚಿವರು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅವರೊಂದಿಗೆ ಸಮಾಲೋಚನೆ ನಡೆಸಿ ಹೊರಗಿನಿಂದ ತಾಲ್ಲೂಕಿನೊಳಗೆ ನುಸುಳಿರುವ ಜನರ ಪತ್ತೆಯನ್ನು ಶಿಕ್ಷಕರು ಎಚ್ಚರಿಕೆಯಿಂದ ಮಾಡಿ ಮಾಹಿತಿಯನ್ನು ತಹಶೀಲ್ದಾರ್ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನೀಡುವಂತೆ ಸೂಚಿಸಿದರು.

ಕೊರೋನಾ ಸೋಂಕು ಪತ್ತೆಯಾಗಿದ್ದು ಕಂಟೋನ್ಮೆಂಟ್ ಜೋನ್ ಆಗಿ ಸೀಲ್ ಆಗಿರುವ ಜಾಗಿನಕೆರೆ ಮತ್ತು ರಾಜಘಟ್ಟ ಗ್ರಾಮಗಳ ಜನರಿಗೆ ಆರೋಗ್ಯದ ಬಗ್ಗೆ ಎಚ್ಚರ ವಹಿಸುವ ಜೊತೆಗೆ ಕೊರೋನಾ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ಅಧಿಕಾರಿಗಳ ತಂಡಕ್ಕೆ ನಿರ್ದೇಶನ ನೀಡಿದರು.

Related