ಸಾಲ ಮಾಡಿ ತುಪ್ಪ ತಿನ್ನುವ ಚಾಳಿ

ಸಾಲ ಮಾಡಿ ತುಪ್ಪ ತಿನ್ನುವ ಚಾಳಿ

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಲ ಮಾಡಿ ತುಪ್ಪ ತಿನ್ನುವ ಚಾಳಿ ಇದೆ. ಅದಕ್ಕಾಗಿಯೇ ಇರುವ ಎಲ್ಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಬರುವ ತೆರಿಗೆ ಹಣ, ಜಿಎಸ್ಟಿ ತೆರಿಗೆ ಸಾಕಷ್ಟು ಬಂದರೂ ಸರ್ಕಾರ ಆಸ್ತಿ ಮಾರಾಟ ಮಾಡಲು ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆ ಖಾಸಗಿಯವರಿಗೆ ಕೊಟ್ಟರೆ ತಾವು ಭರವಸೆ ನೀಡಿದ್ದ ಉದ್ಯೋಗ ಸೃಷ್ಟಿ ಹೇಗೆ ಮಾಡುತ್ತಾರೆ ಎಂದರು.

ರೈತ ವಿರೋಧಿ ಕಾನೂನು ಜಾರಿ ಕುರಿತು, ಜನರ ವೈಯಕ್ತಿಕ ಸ್ವಾತಂತ್ರ‍್ಯ ಹರಣ ಮಾಡುವ ಪೆಗಾಸಸ್ ಗೂಢಚರ್ಯೆ ಕುರಿತು ಚರ್ಚಿಸಲು ಮುಂದಾದರೆ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಚರ್ಚೆಗೆ ಬರುವುದಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಮಾರಾಟ ಮಾಡಿ 6 ಲಕ್ಷ ಕೋಟಿ ವರಮಾನ ಗಳಿಸಲು ಮೋದಿ ಸರ್ಕಾರ ಮುಂದಾಗಿದೆ. ಎಚ್‌ಎಎಲ್, ಬಿಎಚ್‌ಇಎಲ್, ಏರ್ ಇಂಡಿಯಾ, ಬಿಎಸ್‌ಎನ್‌ಎಲ್, ಎನ್‌ಟಿಪಿಸಿಗಳನ್ನು ಮಾರಾಟ ಇಲ್ಲವೇ ಸುದೀರ್ಘ ಅವಧಿಗೆ ನಿರ್ವಹಿಸಲು ಗುತ್ತಿಗೆ ನೀಡುತ್ತಿದ್ದಾರೆ. ಒಟ್ಟಾರೆ ಮೋದಿ, ಅಮಿತ್ ಶಾ ಅವರು ಇಡೀ ದೇಶದ ಆಡಳಿತವನ್ನು ತಾವಿಬ್ಬರೇ ನಡೆಸಬೇಕು ಎಂದು ಹುನ್ನಾರ ನಡೆಸಿದ್ದಾರೆ. ಜನರು ಈ ಕುರಿತು ಜಾಗೃತರಾಗಬೇಕು ಎಂದರು.

ರಾಹುಲ್ ಧೈರ್ಯದ ಕೆಲಸ

ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಪಂಜಾಬ್‌ನಲ್ಲಿ ದಲಿತ ಮುಖ್ಯಮಂತ್ರಿಗೆ ಅವಕಾಶ ನೀಡುವ ಮೂಲಕ ಭಾರಿ ಧೈರ್ಯದ ಕೆಲಸ ಮಾಡಿದ್ದಾರೆ ಎಂದು ಖರ್ಗೆ ಶ್ಲಾಘಿಸಿದರು.

ಪರಮೇಶ್ವರ್‌ರನ್ನೇ ಕೇಳಿ

ರಾಜ್ಯದಲ್ಲಿ ಕಾಂಗ್ರೆಸ್ ದಲಿತ ಮುಖ್ಯಮಂತ್ರಿ ಆಯ್ಕೆ ಮಾಡಬೇಕು ಎಂದು ಮಾಜಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಈ ವಿಚಾರದ ಕುರಿತು ಪರಮೇಶ್ವರ್ ಅವರನ್ನೇ ಕೇಳಿ ಎಂದರು.

Related