ಕೌಶಲ್ಯ ಕರ್ನಾಟಕ ತರಬೇತುದಾರರ ಫ್ರೀಡಂ ಪಾರ್ಕ್ ನಲ್ಲಿ ಧರಣಿ

  • In State
  • October 16, 2023
  • 223 Views
ಕೌಶಲ್ಯ ಕರ್ನಾಟಕ ತರಬೇತುದಾರರ ಫ್ರೀಡಂ ಪಾರ್ಕ್ ನಲ್ಲಿ ಧರಣಿ

ಬೆಂಗಳೂರು: ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಂದ ನೀಡಲಾಗುತ್ತಿದ್ದ ಕೌಶಲ್ಯ ತರಬೇತಿಗಳನ್ನು ಕಡಿತಗೊಳಿಸಿ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿಐ ಹಾಗೂ ಪಾಲಿಟೆಕ್ನಿಕ್, ಬಿಟಿಟಿಸಿ, ಮತ್ತು ಇಂಡಸ್ಟ್ರಿಗಳಲ್ಲಿ ತರಬೇತಿ ಕೋರ್ಸ್ ಗಳನ್ನು ನಡೆಸಲು ಅನುದಾನವನ್ನು ಘೋಷಿಸುವ ಮೂಲಕ ಹತ್ತು ವರ್ಷಗಳಿಂದ ಕೌಶಲ್ಯ ತರಬೇತಿ ನೀಡುತ್ತಿರುವವರಿಗೆ ಅನ್ಯಾಯವಾಗಿದ್ದನ್ನು ಪ್ರತಿಭಟಿಸಿ ಇಂದಿನಿಂದ ಫ್ರೀಡಂ ಪಾರ್ಕ್ ನಲ್ಲಿ ತರಬೇತುದಾರರು ಧರಣಿ ಕೂತಿದ್ದಾರೆ.

ಕೌಶಲ್ಯ ಕರ್ನಾಟಕ ತರಬೇತಿ ಕೇಂದ್ರಗಳ ಒಕ್ಕೂಟದ ಗೌರವಾಧ್ಯಕ್ಷರಾದ ಹೇಮಾವತಿ ಮತ್ತು ಇತರೆ ತರಬೇತುದಾರರು ಫ್ರೀಡಂ ಪಾರ್ಕ್ ನಲ್ಲಿ ಧರಣಿ ಕುಳಿತು ಇಂದು ಮಾಧ್ಯಮದೊಂದಿಗೆ ಮಾತನಾಡುತ್ತಾ, ಮುಖ್ಯಮಂತ್ರಿಗಳ ಕೌಶಲ್ಯ ತರಬೇತಿ ಇಲಾಖೆಯನ್ನು 2016  ನೇ ಸಾಲಿನಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಇಲಾಖೆಯನ್ನು ಪ್ರಾರಂಭಿಸಿದ್ದು ಮುಖ್ಯಮಂತ್ರಿಗಳ ಕೌಶಲ್ಯ ತರಬೇತಿ  ಇಲಾಖೆಯೂ  ಖಾಸಗಿ  ಸಂಸ್ಥೆಗಳಿಂದ ತಮ್ಮ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ತರಬೇತಿ ಕೇಂದ್ರಗಳನ್ನು ಸಿದ್ಧಪಡಿಸಿಕೊಂಡು ಸಂಸ್ಥೆಗಳ ಮುಖಾಂತರ ಒಡಂಬಡಿಕೆಯನ್ನು ಮಾಡಿಕೊಂಡು ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಸಹ ತಲುಪುವ ಮೂಲಕ ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿಗಳನ್ನು ನೀಡಿ ಉದ್ಯೋಗಾವಕಾಶಗಳನ್ನು  ಸೃಷ್ಟಿಸುವಲ್ಲಿ ಇಲಾಖೆಯು ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ ಎಂದರು.

ಆದರೆ ಇದೇ ಸರ್ಕಾರವು ಇದೇ ಇಲಾಖೆಯು ಅಂದಿನಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿರುವ ತರಬೇತಿ ಕೇಂದ್ರಗಳನ್ನು ದಿಢೀರನೆ ನಿರ್ಲಕ್ಷಿಸಿ ತರಬೇತಿಗಳಿಗೆ ಕಾರ್ಯಾದೇಶಗಳನ್ನು ನೀಡದೆ ತರಬೇತಿ ಕೇಂದ್ರಗಳ ಸಮಸ್ಯೆಗಳನ್ನು ಬಗೆಹರಿಸಿಲ್ಲ.

ಇದರಿಂದ ಸರ್ಕಾರದ ಒಳಸಂಚು ಒಳಮರ್ಮ ಏನು ಎಂದು ತರಬೇತುದಾರಿಗೆ ತಿಳಿಯಲಾಗದೆ. ಇಂದು ಫ್ರೀಡಂ ಪಾರ್ಕಿನಲ್ಲಿ ಧರಣಿ ಮಾಡಿ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.

ಇದರಿಂದ ಎಲ್ಲಾ ತರಬೇತಿ ಕೇಂದ್ರಗಳನ್ನು ಹಾಗೂ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಿಸುಮಾರು 25,000ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿರುದ್ಯೋಗಸ್ತ್ರನ್ನಾಗಿಸಿ ತೊಂದರೆಗೆ ಸಿಲುಕಿಸಿದಂತಾಗಿದೆ.

ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಂದು ತರಬೇತಿ ಕೇಂದ್ರವು ತನ್ನದೇ ಆದ ಸ್ವಂತ ಬಂಡವಾಳವನ್ನು ಹೂಡಿ ತರಬೇತಿ ಕೇಂದ್ರವನ್ನು ಇಲಾಖೆಯ  ನೀತಿ ನಿಯಮಗಳಿಗೆ ಅನುಗುಣವಾಗಿ  ನಿರ್ಮಿಸಲು  ಸರಿಸುಮಾರು ಒಂದು ಕೇಂದ್ರವನ್ನು ಪ್ರಾರಂಭಿಸಲು  ಸರಿಸುಮಾರು 25 ಲಕ್ಷ ರೂಪಾಯಿಗಳ ಬಂಡವಾಳನ್ನು  ಹೂಡಿರುತ್ತವೆ.

ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ್ಯ ಸಚಿವರಿಗೂ  ಮುಖ್ಯಮಂತ್ರಿಗಳಿಗೂ ಮನವಿ ನೀಡಿದ್ದು ಇಲ್ಲಿಯವರೆಗೂ ಯಾವುದೇ ಪ್ರತ್ಯುತ್ತರವಾಗಲಿ ಸಮಸ್ಯೆಗೆ ಪರಿಹಾರವಾಗಲಿ  ದೊರೆತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

Related