ನಮ್ಮ ನಾಡಲ್ಲಿ ನೆಲೆಸಿರುವವರಿಗೆ ಕನ್ನಡ ಕಲಿಸಬೇಕು: ಸಿಎಂ

ನಮ್ಮ ನಾಡಲ್ಲಿ ನೆಲೆಸಿರುವವರಿಗೆ ಕನ್ನಡ ಕಲಿಸಬೇಕು: ಸಿಎಂ

ಬೆಂಗಳೂರು: ಕನ್ನಡ, ಕರ್ನಾಟಕ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಆದರೂ ಸಹ ಕನ್ನಡವನ್ನು ಮಾತನಾಡಲು ಹಿಂದೇಟು ಹಾಕುತ್ತಾರೆ. ಬೇರೆ ರಾಜ್ಯಗಳಿಗೆ ಹೋದರೆ ಮೊದಲು ಅವರ ರಾಜ್ಯದ ಭಾಷೆಯನ್ನು ನಾವು ಮಾತಾಡುತ್ತೇವೆ. ಆದರೆ ನಮ್ಮ ಕರ್ನಾಟಕಕ್ಕೆ ಬಂದರೆ ಮಾತ್ರ ನಮ್ಮ ಕನ್ನಡ ಭಾಷೆಯನ್ನು ಮಾತನಾಡಲು ಹಿಂದೇಟು ಹಾಕುತ್ತಾರೆ. ನಾವು ಬೇರೆ ರಾಜ್ಯಗಳಿಗೆ ಹೋದರೆ ಆ ರಾಜ್ಯದ ಭಾಷೆಯಲ್ಲಿ ಮಾತಾಡುತ್ತೇವೆ ಆದರೆ ನಮ್ಮ ಕರ್ನಾಟಕದಲ್ಲಿ ಮಾತ್ರ ಅನ್ಯ ರಾಜ್ಯಗಳ ಭಾಷೆಯನ್ನು ಬಳಸುತ್ತಾರೆ. ಹಾಗಾಗಿ ಬೇರೆ ರಾಜ್ಯಗಳಿಗೂ ಮತ್ತು ನಮ್ಮ ಕರ್ನಾಟಕ ರಾಜ್ಯಕ್ಕೂ ಇರುವ ವ್ಯತ್ಯಾಸ ಇಲ್ಲಿ ಕಂಡುಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಬೇರೆ ಭಾಷೆ ಕಲಿತರು ನಮ್ಮ ಭಾಷೆಯನ್ನು ನಾವು ಬಿಟ್ಟುಕೊಡಬಾರದು. ನಮ್ಮ ಕರ್ನಾಟಕಕ್ಕೆ ಬಂದಿರುವ ಎಲ್ಲರೂ ಕನ್ನಡ ಕಲಿಯಲೇಬೇಕು ನಮ್ಮ ಕನ್ನಡ ಉಳಿಸಬೇಕು ಎಂದು ಕಿವಿ ಮಾತು ಹೇಳಿದರು.

ಈ ಸಂಬಂಧ ಮಾತನಾಡಿದ ಅವರು, ನಾವೆಲ್ಲರೂ ಕನ್ನಡಿಗರು, ಕರ್ನಾಟಕದ ಏಕೀಕರಣವಾದಾಗಿನಿಂದ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಕನ್ನಡ ನಾಡಿನಲ್ಲಿ ನೆಲೆಸಿದ್ದಾರೆ ಎಂದರು.

ಈ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆ ಮಾತನಾಡುವುದನ್ನು ಕಲಿಯಬೇಕು. ತಮಿಳುನಾಡು, ಕೇರಳ, ತೆಲಂಗಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಕಲಿಯದೇ ಕನ್ನಡ ಮಾತನಾಡಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಬಾರದೇ ಇದ್ದರೂ ಬದುಕಬಹುದು. ಇದೇ ನಮ್ಮ ರಾಜ್ಯಕ್ಕೂ ಹಾಗೂ ಪಕ್ಕದ ರಾಜ್ಯಗಳಿಗೂ ಇರುವ ವ್ಯತ್ಯಾಸ ಎಂದು ತಿಳಿಸಿದರು.

ಕರ್ನಾಟಕದ ಏಕೀಕರಣವಾಗಿ 68 ವರ್ಷಗಳು ಸಂದರೂ ರಾಜ್ಯದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದಿರುವುದು ಸರಿಯಲ್ಲ. ಕನ್ನಡಿಗರು ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸುವ ಬದಲು, ಅವರ ಭಾಷೆಯನ್ನೇ ನಾವು ಮೊದಲು ಕಲಿಯುತ್ತಿದ್ದೇವೆ. ಕನ್ನಡಿಗರ ಈ ವರ್ತನೆ ಭಾಷಾ ಬೆಳವಣಿಗೆ ಹಾಗೂ ನಾಡು, ನುಡಿ, ಸಂಸ್ಕೃತಿ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದ ಕೆಲವು ಭಾಗಗಳಲ್ಲಿ ಪರಭಾಷಿಗರು ಕನ್ನಡವನ್ನು ಮಾತನಾಡುವುದೇ ಇಲ್ಲ. ಕನ್ನಡಿಗರು ಅಭಿಮಾನ ಶೂನ್ಯರಲ್ಲ. ಆದರೆ ಹೆಚ್ಚಿನ ಉದಾರತೆಯಿಂದಾಗಿ ಈ ರೀತಿ ಆಗಿದೆ. ಬೇರೆ ಭಾಷಿಗರನ್ನು, ಧರ್ಮದವರನ್ನೂ ಪ್ರೀತಿಸಬೇಕು. ಆದರೆ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

Related