1 ಸಾವಿರ ಎಕರೆ ಜಾಗದಲ್ಲಿ ಕೈಗಾರಿಕಾ ವಲಯ

1 ಸಾವಿರ ಎಕರೆ ಜಾಗದಲ್ಲಿ ಕೈಗಾರಿಕಾ ವಲಯ

ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ಕೈಗಾರಿಕಾಭಿವೃದ್ಧಿಗೆ 1,000 ಎಕರೆ ಜಾಗ ಗುರುತಿಸಿದ್ದು, ಇದು ದೊಡ್ಡ ಕೈಗಾರಿಕಾ ವಲಯವಾಗಿ ಬೆಳೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಚಿಂತಾಮಣಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಚಿಂತಾಮಣಿಯನ್ನು ಆರ್ಥಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ 1,000 ಎಕರೆ ಜಾಗವನ್ನು ಕೈಗಾರಿಕಾ ವಲಯವಾಗಿ ಅಭಿವೃದ್ಧಿ ಮಾಡಲು ಗುರುತಿಸಲಾಗಿದೆ. ಅನೇಕ ಉದ್ಯಮ ಸಂಸ್ಥೆಗಳು ಇಲ್ಲಿ ಉದ್ಯಮ ಆರಂಭಿಸಲು ಒಪ್ಪಂದ ಮಾಡಿಕೊಂಡಿವೆ. ಈ ಪ್ರದೇಶ ಮುಂದಿನ ದಿನಗಳಲ್ಲಿ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆಯಲಿದೆ. ಈ ಭಾಗದ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ” ಎಂದು ವಿವರಿಸಿದರು.

“ಯುವಜನರು ವ್ಯಾಸಂಗ ಮುಗಿಸಿದ ಕೂಡಲೇ ಉದ್ಯೋಗ ಸಿಗುವಂತಾಗಬೇಕು. ಇದಕ್ಕಾಗಿ ಬೇಡಿಕೆ ಇರುವ ಕೋರ್ಸ್ ಗಳನ್ನು ಆಧರಿಸಿಯೇ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಚಿಂತಾಮಣಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಗುರಿ ಇದೆ” ಎಂದರು.

ಇದೇ ವೇಳೆ ಕೈವಾರದ ಶ್ರೀ ಯೋಗಿನಾರಾಯಣ ಕ್ಷೇತ್ರದಲ್ಲಿ ಸಚಿವ ಡಾ.ಕೆ.ಸುಧಾಕರ್ ಪೂಜೆ ಸಲ್ಲಿಸಿದರು. ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.

ಕಾಮಗಾರಿಗಳಿಗೆ ಚಾಲನೆ

ಪ್ರಧಾನಮಂತ್ರಿ ಗ್ರಾಮ ಸಡಕ್-3 ನೇ ಯೋಜನೆಯಡಿ 18 ಕೋಟಿ ರೂ. ವೆಚ್ಚದಲ್ಲಿ 30 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಸಚಿವ ಡಾ.ಕೆ.ಸುಧಾಕರ್ ಗುದ್ದಲಿ ಪೂಜೆ ನೆರವೇರಿಸಿದರು.

ಮೈಲಾಪುರ ಗ್ರಾಮದಿಂದ ಬೂರಗಮಾಕಲಹಳ್ಳಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬೊಮ್ಮೆಕಲ್ಲುವಿನಲ್ಲಿ, ಚಿನ್ನಸಂದ್ರದಿಂದ ನಾಯಿಂದ್ರಹಳ್ಳಿವರೆಗಿನ ರಸ್ತೆ ಅಭಿವೃದ್ಧಿಗೆ ಬ್ಯಾಲಹಳ್ಳಿ ಕ್ರಾಸ್ ನಲ್ಲಿ ಮತ್ತು ಕಾಚಹಳ್ಳಿಯಿಂದ ವಿಶ್ವನಾಥಪುರವರೆಗಿನ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

Related