ಎಎಪಿ ಸೇರಲು ಮಿಸ್ಡ್ ಕಾಲ್ ಅಭಿಯಾನ

ಎಎಪಿ ಸೇರಲು ಮಿಸ್ಡ್ ಕಾಲ್ ಅಭಿಯಾನ

ಬೆಂಗಳೂರು, ಫೆ. 25: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಆಮ್ ಆದ್ಮಿ ಪಕ್ಷವು ದೇಶದ ಪ್ರತಿಯೊಂದು ಮನೆಗೂ ‘ಕಾಯಕದ ರಾಜಕೀಯ’ ಸಂದೇಶ ಕೊಂಡೊಯ್ಯಲು ರಾಷ್ಟ್ರ ನಿರ್ಮಾಣ ಅಭಿಯಾನ ಪ್ರಾರಂಭಿಸಿದೆ.

ಬೆಂಗಳೂರಿನಿಂದ ಆರಂಭವಾಗಿ ಕರ್ನಾಟಕದಾದ್ಯಂತ ಮಾರ್ಚ್ 23 ರವರೆಗೆ ಮುಂದುವರಿಯಲಿದೆ. ದೆಹಲಿಯ ‘ಅರವಿಂದ್ ಕೇಜ್ರಿವಾಲ್ ಅಭಿವೃದ್ಧಿ ಮಾದರಿಯನ್ನು’ ಕರ್ನಾಟಕದ ಪ್ರತಿಯೊಂದು ಮನೆಗೂ ಕೊಂಡೊಯ್ಯಲು ಪಕ್ಷವು ಉದ್ದೇಶಿಸಿದೆ. ರಾಷ್ಟ್ರವನ್ನು ಮುಂದೆ ಕೊಂಡೊಯ್ಯಲು ‘ಕಾಯಕ ರಾಜಕೀಯ’ ಬೆಂಬಲಿಸುವಂತೆ ಜನರಿಗೆ ಕರೆ ಕೊಡಲಾಗುತ್ತದೆ ಎಂದು ರಾಜ್ಯ ಸಂಚಾಲ ಪೃಥ್ವಿರೆಡ್ಡಿ ತಿಳಿಸಿದರು.

ಭಾರತಕ್ಕೆ ಬರುವ ಇತರ ರಾಷ್ಟ್ರಗಳ ಅಧ್ಯಕ್ಷರು ದೇಶದ ತಾಜ್ ಮಹಲ್‌ನಂತಹ ಪ್ರವಾಸಿ ಸ್ಥಳಗಳನ್ನು ನೋಡಿ ಹೋಗುತ್ತಿದ್ದರು, ಮೊದಲ ಬಾರಿಗೆ ಸರ್ಕಾರಿ ಶಾಲೆಗಳನ್ನು ನೋಡಲು ಬರುತ್ತಿದ್ದಾರೆ. ಇದು ಆಮ್ ಆದ್ಮಿ ಪಕ್ಷದ ಸಾಧನೆ. ಅಲ್ಲದೆ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ‘ಕಾಯಕದ ರಾಜಕಾರಣ’ದಿಂದ ಮೂರು ಬಾರಿ ಗೆದ್ದು ಜಾತಿ-ಹಣ ಬಲವಿಲ್ಲದೆ ರಾಜಕಾರಣದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಮಾತನ್ನು ಸುಳ್ಳು ಮಾಡಿ ತೋರಿಸಿದೆ ಎಂದು ಪೃಥ್ವಿರೆಡ್ಡಿಯವರು ಹೇಳಿದರು.

ಅರವಿಂದ್ ಕೇಜ್ರಿವಾಲ್ ಸರ್ಕಾರ ದೆಹಲಿಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಮತ್ತೆ ಅಧಿಕಾರ ಸ್ವೀಕರಿಸಿದ ನಂತರ, ಆಮ್ ಆದ್ಮಿ ಪಕ್ಷವು ಫೆಬ್ರವರಿ 11 ರಂದು ದೇಶಾದ್ಯಂತ ರಾಷ್ಟ್ರ ನಿರ್ಮಾಣ ಅಭಿಯಾನವನ್ನು ಪ್ರಾರಂಭಿಸಿತು. ಪ್ರಚಾರದ ಆರಂಭದಲ್ಲಿ ಪಕ್ಷವು ಮಿಸ್ಡ್ ಕಾಲ್ ಸಂಖ್ಯೆ 7412-042-042 ನ್ನು ನೀಡಿತು. ದೆಹಲಿಯಲ್ಲಿ ಎಎಪಿ ಅಳವಡಿಸಿದ ಕಾಯಕದ ರಾಜಕಾರಣ ರಾಷ್ಟ್ರದಾದ್ಯಂತ ಜನರು ಮೆಚ್ಚಿದ್ದು, ಕೇವಲ 24 ಗಂಟೆಗಳಲ್ಲಿ 11 ಲಕ್ಷ ಜನರು ಮಿಸ್ಡ್ ಕಾಲ್ ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ಅಭಿಯಾನಕ್ಕೆ ಸೇರಿದ್ದಾರೆ. ಶಾಲೆಗಳು, ಆಸ್ಪತ್ರೆಗಳು, ನೀರು, ವಿದ್ಯುತ್ ಮತ್ತು ಮಹಿಳೆಯರ ಸುರಕ್ಷತೆ ಸೇರಿದಂತೆ ದೆಹಲಿಯ ಕೇಜ್ರಿವಾಲ್ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ಮಾಡಿದ ಪರಿಣಾಮಕಾರಿ ಅಭಿವೃದ್ಧಿಯೇ ಈ ಅಗಾಧ ಬೆಂಬಲಕ್ಕೆ ಕಾರಣವಾಗಿದೆ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದರು.

ಪ್ರತಿ ಪಟ್ಟಣ, ಹಳ್ಳಿ, ಬೀದಿ ಹಾಗು ಮನೆಗೂ ರಾಷ್ಟ್ರ ನಿರ್ಮಾಣ ಅಭಿಯಾನದ ಮೂಲಕ ಕೊಂಡೊಯ್ಯುತ್ತದೆ. ಕೇಜ್ರಿವಾಲ್ ಅವರ ಅಭಿವೃದ್ಧಿ ಮಾದರಿಯ ಬಗ್ಗೆ ಜನರಿಗೆ ತಿಳಿಸುವುದರ ಜೊತೆಗೆ ರಾಷ್ಟ್ರ ನಿರ್ಮಾಣ ಅಭಿಯಾನದಲ್ಲಿ ಪಕ್ಷಕ್ಕೆ ಸೇರಲು ನೀಡಲಾದ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವಂತೆ ಪ್ರೇರೇಪಿಸಲಾಗುವುದು ಎಂದು ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆ ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾವಿರಾರು ಪೋಸ್ಟರ್‌ಗಳನ್ನು ಹಾಕಲಾಗುವುದು, ಇದರಿಂದಾಗಿ ಸಂದೇಶವು ರಾಜ್ಯದ ಪ್ರತಿಯೊಂದು ಪ್ರದೇಶ ಮತ್ತು ಮೂಲೆ-ಮೂಲೆಗಳಲ್ಲಿನ ಜನರಿಗೆ ತಲುಪುತ್ತದೆ. ಇದಲ್ಲದೆ, ರಾಷ್ಟ್ರ ನಿರ್ಮಾಣ ಅಭಿಯಾನದ ಬಗ್ಗೆ ಜನರಿಗೆ ತಿಳಿಸಲು ಮತ್ತು ಹೆಚ್ಚು ಹೆಚ್ಚು ಜನರನ್ನು ಅಭಿಯಾನಕ್ಕೆ ಸೇರಲು ಉತ್ತೇಜಿಸಲಾಗುತ್ತದೆ. ಕರ್ನಾಟಕದ ಆಮ್ ಅದ್ಮಿ ಪಕ್ಷವು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳು ಮತ್ತು ಪ್ರಮುಖ ನಗರಗಳಲ್ಲಿ ಪತ್ರಿಕಾಗೋಷ್ಠಿ ಹಾಗೂ ಸದಸ್ಯತ್ವ ಅಭಿಯಾನ ನಡೆಸಲಿದೆ ಎಂದು ತಿಳಿಸಿದರು.

Related