ಜೆಡಿಎಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತದೆ: ಕುಮಾರಸ್ವಾಮಿ

ಜೆಡಿಎಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತದೆ: ಕುಮಾರಸ್ವಾಮಿ

ರಾಮನಗರ, ಜು 25: ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು ಭವಿಷ್ಯ ನುಡಿದರು.

ಇಂದು ರಾಮನಗರ ನಗರ ವ್ಯಾಪ್ತಿಯ ಕೆಂಪೇಗೌಡನ ದೊಡ್ಡಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಹಾಗೂ ಡಿಜಿಟಲ್ ಗ್ರಂಥಾಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಒತ್ತು ಕೊಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​ ಪಕ್ಷವನ್ನು ಮುಗಿಸಬೇಕು ಎಂದು ಹೊರಟಿವೆ ಎಂದರು. ಎರಡು ರಾಷ್ಟ್ರೀಯ ಪಕ್ಷಗಳಿಂದ ಜೆಡಿಎಸ್‌ ಪಕ್ಷವನ್ನು ನಿರ್ನಾಮ ಮಾಡಲು ಆಗಲ್ಲ. ಈ ಬಾರಿ ಕಾಂಗ್ರೆಸ್, ಬಿಜೆಪಿಗಿಂತ ನಮ್ಮ ಪಕ್ಷ 15-20 ಹೆಚ್ಚಿನ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಗೆ ಪ್ರಚಾರವೇ ಜೀವಾಳ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚುನಾವಣಾ ಕಣದಿಂದ ಹಿಂದೆ ಸರಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅದೆಲ್ಲಾ ಅವರ ಪಕ್ಷದ ತೀರ್ಮಾನಗಳು. ಅವರ ನಿರ್ಧಾರದಿಂದ ಸಂಚಲನ ಆಗೋದು ಬಿಡೋದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಅದೇನು ಮಹತ್ವದ ವಿಷಯವಲ್ಲ ಎಂದರು. ವಿಧಾನಸಭೆಯ ಚುನಾವಣೆ ಅಭ್ಯರ್ಥಿ ಆಗುವುದೇ ರಾಜ್ಯದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಅಂದುಕೊಂಡಿದ್ದಾರೆ. ಈ ಬಗ್ಗೆ ಅಷ್ಟೊಂದು ಪ್ರಚಾರ ಪಡೆಯವುದು ಅಗತ್ಯ ಏನಿದೆ. ಬಿಜೆಪಿಯವರಿಗೆ ಪ್ರಚಾರದ ಮೂಲಕವೇ ಅಧಿಕಾರಕ್ಕೆ ಬರುವುದು ಅಭ್ಯಾಸ ಆಗಿಬಿಟ್ಟಿದೆ. ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅಧಿಕಾರ ಹಿಡಿಯುವುದಿಲ್ಲ. ರಾಜಕೀಯದಲ್ಲಿ ದೊಡ್ಡ ಮಟ್ಟದ ಪ್ರಚಾರ ಪಡೆದು ಅಧಿಕಾರ ಹಿಡಿಯುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಹೀಗೆ ಪ್ರಚಾರವೇ ಬಿಜೆಪಿ ಪಕ್ಷದ ಜೀವಾಳವಾಗಿದೆ ಎಂದು ಹೆಚ್‌.ಡಿ. ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.

 

Related