ಸಂಸದರ ವಿರುದ್ಧ ಜೆಡಿಎಸ್ ಪ್ರತಿಭಟನೆ

ಸಂಸದರ ವಿರುದ್ಧ ಜೆಡಿಎಸ್ ಪ್ರತಿಭಟನೆ

ತುಮಕೂರು : ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಹಾಗೂ ಜೆಡಿಎಸ್ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ನಡುವಿನ ಪರ-ವಿರೋಧ ಪ್ರತಿಭಟನೆಗಳು ಮುಂದುವರಿದಿದ್ದು, ಬಸವರಾಜು ವಿರುದ್ಧ ಜೆಡಿಎಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಬಿಜಿಎಸ್ ವೃತ್ತದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು. ಜಿಲ್ಲೆಗೆ ಬಸವರಾಜು ಅವರು ಯಾವ ಕೊಡುಗೆ ನೀಡಿದ್ದಾರೆ? ಕೋವಿಡ್ ಸಂದರ್ಭದಲ್ಲಿ ಜನರ ನೆರವಿಗೆ ಬಾರದೆ ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಶ್ರೀನಿವಾಸ್ ಅವರು ಗುಬ್ಬಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇಂತಹವರ ಮೇಲೆ ಸಂಸದರು ಕೀಳುಮಟ್ಟದ ಭಾಷೆ ಬಳಸಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಅಂಜನಪ್ಪ ಖಂಡಿಸಿದರು.
ಗುಬ್ಬಿ ಕ್ಷೇತ್ರಕ್ಕೆ ಹೇಮಾವತಿ ನೀರು ಹರಿಸಲು ಶ್ರಮಿಸಿದ್ದು, ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದೆ, ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಇಂತಹವರ ಬೆಳವಣಿಗೆಯನ್ನು ಸಹಿಸದೆ ಅವಹೇಳನ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಶ್ರೀನಿವಾಸ್ ವಿರುದ್ಧ ಬಸವರಾಜು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಮಾತಿನ ಮೇಲೆ ಹಿಡಿತ ಇಲ್ಲವಾಗಿದೆ ಎಂದು ಟೀಕಿಸಿದರು.

ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ಕ್ಷೇತ್ರದ ಜನತೆಯ ಕಷ್ಟ ಸುಖಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಶಾಸಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು’ ಖಂಡನೀಯ ಎಂದರು.

ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷ ಗುರು ರೇಣುಕಾರಾಧ್ಯ, ಬಸವರಾಜು ಅವರು ಸುಳ್ಳನ್ನೇ ಮೈಗೂಡಿಸಿಕೊಂಡು ಜನರಿಗೆ ಸದಾ ಸುಳ್ಳು ಹೇಳುತ್ತಾ ಬಂದಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ಅಣೆಕಟ್ಟೆ ನಿರ್ಮಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ 550 ಕೋಟಿ ಬಿಡುಗಡೆಯಾಗಿದೆ. ಇದಕ್ಕೆ ಜಮೀನು ನೀಡುವ ರೈತರಿಗೆ ಎಕರೆಗೆ 80 ಲಕ್ಷದಿಂದ 1 ಕೋಟಿ ನೀಡಲಾಗುವುದು ಎಂದು ಹೇಳಿದ್ದಾರೆ.

ಆಗ ಶ್ರೀನಿವಾಸ್, ರೈತರಿಗೆ ಸುಳ್ಳು ಹೇಳಬೇಡಿ ಎಂದು ಸಂಸದರಿಗೆ ಹೇಳಿದ್ದಾರೆ. ಇಷ್ಟು ಹೇಳಿದ್ದಕ್ಕೆ ಶಾಸಕರಿಗೆ ಸಂಸದರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೂಡಲೇ ಶಾಸಕ, ಕ್ಷೇತ್ರದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಆರ್.ದೇವರಾಜು, ಗೋವಿಂದರಾಜು, ನರಸಿಂಹ ಮೂರ್ತಿ, ಶ್ರೀನಿವಾಸ್, ಮಂಜುನಾಥ್, ಧರಣೇಂದ್ರಕುಮಾರ್, ಮುಖಂಡರಾದ ಗಂಗಣ್ಣ, ಜಾಂಗೀರ್ ರವೀಶ್, ನರಸಿಂಹ ರಾಜು, ಕೃಷ್ಣಮೂರ್ತಿ, ತಾಹೇರಾ ಕುಲ್ಸುಮ್, ಸುಲ್ತಾನ್ ಮಹಮ್ಮದ್, ಇಸ್ಮಾಯಿಲ್ ಇತರರು ಭಾಗವಹಿಸಿದ್ದರು.

Related