ಐಟಿ ದಾಳಿ, 94 ಕೋಟಿ ನಗದು, ಚಿನ್ನಾಭರಣಗಳ ವಶ

ಐಟಿ ದಾಳಿ, 94 ಕೋಟಿ ನಗದು, ಚಿನ್ನಾಭರಣಗಳ ವಶ

ನವದೆಹಲಿ: ಇತ್ತೀಚಿಗಷ್ಟೇ ಕರ್ನಾಟಕದಲ್ಲಿ ಐಟಿ ದಾಳಿ ನಡೆದಿದ್ದು 42 ಕೋಟಿ ರೂಪಾಯಿಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದರ ಬೆನ್ನಲ್ಲೇ ರಾಜ ಮಾತ್ರವಲ್ಲದೆ ವಿವಿಧ ರಾಜ್ಯಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿ ಸುಮಾರು 94 ಕೋಟಿ ನಗದು ಸೇರಿದಂತೆ 8 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರ ವಿದೇಶಿಯ ನಿರ್ಮಿತ 30 ಐಷಾರಾಮಿ ವಾಚಗಳನ್ನು ವಶಪಡಿಸಿಕೊಂಡಿದೆ ಎಂದು ಸಿಬಿಡಿಟಿ ಸೋಮವಾರ ತಿಳಿಸಿದೆ.

ಅ. 12ರಂದು ಐಟಿ ಅಧಿಕಾರಿಗಳು ವಿವಿಧ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದರು ಮತ್ತು ಶೋಧ ಕಾರ್ಯ ಪ್ರಾರಂಭಿಸಿದರು. ಬೆಂಗಳೂರು ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ದೆಹಲಿಯ ಕೆಲವು ನಗರಗಳಲ್ಲಿ ಇಲಾಖೆಯು ಒಟ್ಟು 55 ಕಡೆಗಳಲ್ಲಿ ದಾಳಿ ನಡೆಸಿದೆ.

‘ಈ ವೇಳೆ ಅಂದಾಜು 94 ಕೋಟಿ ರೂ. ನಗದು ಮತ್ತು 8 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ.

ಇದಲ್ಲದೆ, ಶೋಧದ ಸಮಯದಲ್ಲಿ, ವಾಚ್‌ಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿರದ ಖಾಸಗಿ ಉದ್ಯೋಗಿ ಬಳಿ ವಿದೇಶಿ ನಿರ್ಮಿತ ಸುಮಾರು 30 ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದೆ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಆದಾಯ ತೆರಿಗೆ ಇಲಾಖೆಗೆ ನೀತಿಗಳನ್ನು ರೂಪಿಸುತ್ತದೆ.

Related