ಕೀಳರಿಮೆ ತೊರೆದು ಏಕಾಗ್ರತೆಯಿಂದ ಕಲಿಯಿರಿ

ಕೀಳರಿಮೆ ತೊರೆದು ಏಕಾಗ್ರತೆಯಿಂದ ಕಲಿಯಿರಿ

ಪ್ರಜಾವಾಹಿನಿ-ತುಮಕೂರು : ಸರಕಾರಿ ಶಾಲೆಯ ಮಕ್ಕಳು ಕೀಳರಿಮೆ ತೊರೆದು ಏಕಾಗ್ರತೆಯಿಂದ ಕಲಿತರೆ ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅಭಿಪ್ರಾಯಪಟ್ಟಿರು.

ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದ ಕುವೆಂಪು ಸಭಾಂಗಣದಲ್ಲಿ ಡಾರ‍್ಯಾಂಕ್ ನಜೀರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ಓದಿ, ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂಬುದನ್ನು ಹಲವಾರು ಜನರು ಸಾಧಿಸಿ ತೋರಿಸಿದ್ದಾರೆ. ಅಂತಹವರಲ್ಲಿ ರ‍್ಯಾಂಕ್ ನಜೀರ್ ಒಬ್ಬರು ಎಂದರು.

೧೯೫೫ರಲ್ಲಿ ಹುಟ್ಟಿದ್ದ ನಜೀರ್ ಅವರು ಸರಕಾರಿ ಶಾಲೆಗಳಲ್ಲಿ ಓದುತ್ತಾ ಪ್ರತಿ ತರಗತಿಯಲ್ಲಿಯೂ ರ‍್ಯಾಂಕ್ ಗಳಿಸಿ, ರ‍್ಯಾಂಕ್ ನಜೀರ್ ಎಂದು ಬಿರುದು ಪಡೆದವರು. ೧೯೭೭-೭೮ರಲ್ಲಿ ತುಮಕೂರಿನ ಜನತೆ ಇವರನ್ನು ಶಾಸಕರಾಗಿ ಆಯ್ಕೆ ಮಾಡಿ ಜನ ಸೇವೆಗೆ ಕಳುಹಿಸಿದರೂ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಶೋಧನಾ ಕ್ಷೇತ್ರಕ್ಕೆ ಮರಳಿ, ನಾಸಾ ವಿಜ್ಞಾನಿಯಾಗಿ ಹಲವಾರು ಸಂಶೋಧನೆ ನಡೆಸಿದ್ದಾರೆ.

ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ತಾನು ಓದಿದ ಸರಕಾರಿ ಶಾಲೆಯ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಒಂದು ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ, ಉತ್ತಮ ಅಂಕಗಳಿಸಿದ ಮಕ್ಕಳಿಗೆ ನಗದು ಪುರಸ್ಕಾರ ನೀಡುತ್ತಾ ಬಂದಿದ್ದು, ಇಂದು ೧ ರಿಂದ ೧೦ನೇ ತರಗತಿಯವರೆಗಿನ ಸುಮಾರು ೧೨ ಜನ ಮಕ್ಕಳಿಗೆ ತಲಾ ೫ ಸಾವಿರ ರೂ.ಗಳ ಧನ ಸಹಾಯದ ಜೊತೆಗೆ, ನೆನಪಿನ ಕಾಣಿಕೆ ನೀಡಿ ಮಕ್ಕಳನ್ನು ಗೌರವಿಸಿದರು. ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಮತ್ತಷ್ಟು ಮಕ್ಕಳು ಉತ್ತಮ ಅಂಕ ಗಳಿಸುವಂತಾಗಲಿ ಎಂದು ಡಾ.ರಫೀಖ್ ಅಹಮದ್ ಹಾರೈಸಿದರು.

ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಪುಸ್ತಕದ ಹುಳುಗಳಲ್ಲ. ಲೋಕಜ್ಞಾನವುಳ್ಳವರು. ತಮ್ಮ ಬೌದ್ದಿಕ ಚುರುಕುತನದ ಜೊತೆಗೆ, ಏಕಾಗ್ರತೆ ಮೈಗೂಡಿಸಿ ಕೊಂಡರೆ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯಬಹುದು ಎಂದರು.

ಬಿ.ಇ.ಓ ರಂಗಧಾಮಪ್ಪ, ೧೫ನೇ ವಾರ್ಡಿನ ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್, ಗುಂಚಿಚೌಕದ ಸರಕಾರಿ ಉರ್ದು ಶಾಲೆಯ ಮುಖ್ಯಶಿಕ್ಷಕಿ ಸಾಧಿಕಾ ಪರ್ವಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

Related