ರಾಮ ಮಂದಿರ ಉದ್ಘಾಟನೆ; ಮಸೀದಿಯಲ್ಲಿ ರುದ್ರಾಭಿಷೇಕ

  • In State
  • January 22, 2024
  • 87 Views
ರಾಮ ಮಂದಿರ ಉದ್ಘಾಟನೆ; ಮಸೀದಿಯಲ್ಲಿ ರುದ್ರಾಭಿಷೇಕ

ಗದಗ: ಅಯೋಧ್ಯೆಯಲ್ಲಿ ಇಂದು ರಾಮ ಮಂದಿರ ಉದ್ಘಾಟನೆಯಾಗಿದ್ದು, ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇನ್ನು ಗದಗ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಎನ್ನದೆ ಭಾವೈಕ್ಯತೆ ಮೆರೆಯುವ ಮೂಲಕ ಮಸೀದಿಯಲ್ಲಿ ರುದ್ರಾಭಿಷೇಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮೊಹರಂ ಮಸೀದಿಯಲ್ಲಿ ಪೂಜೆ ಮತ್ತು ಹೋಮ ಮಾಡಲಾಗಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಹಿಂದೂ-ಮುಸ್ಲಿಂ ಗಲಾಟೆಗಳು ಹೆಚ್ಚಾಗಿ ಕಾಣುತ್ತಿರುವುದರ ಬೆನ್ನಲ್ಲೇ ಇಂದು ರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ ಮಸೀದಿಯಲ್ಲಿ ಭಾರತಾಂಬೆಯ ಚಿತ್ರ ಇಟ್ಟು ರುದ್ರಾಭಿಷೇಕ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಈ ಮೂಲಕ ಹುಣಸಿಕಟ್ಟಿ ಗ್ರಾಮಸ್ಥರು ಭಾವೈಕ್ಯತೆಯ ಸಂದೇಶವನ್ನು ಸಾರಿದ್ದಾರೆ. ರುದ್ರಾಭಿಷೇಕ ಮಾಡಿ, ಭಾರತಮಾತೆಯ ಚಿತ್ರದ ಮುಂದೆ ಕಳಸ ಇರಿಸಿ ಪುಷ್ಪಾರ್ಚನೆ ಮಾಡಲಾಗಿದೆ.

ಮಸೀದಿ ಕಮೀಟಿಯ ರಾಜು ಸಾಬ್ ಹೊಸಳ್ಳಿ, ರುತುಂ ಸಾಬ್ ಹೊಸಳ್ಳಿ ಸೇರಿದಂತೆ ಗ್ರಾಮಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು.

 

Related