ಭಾರೀ ಮಳೆ: ಅಂತರ್ಜಲ ಹೆಚ್ಚಳದಿಂದ ಭೂಕುಸಿತ, ಕಂದಕಗಳು

ಭಾರೀ ಮಳೆ: ಅಂತರ್ಜಲ ಹೆಚ್ಚಳದಿಂದ ಭೂಕುಸಿತ, ಕಂದಕಗಳು

ನರಗುಂದ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಟ್ಟಣದಲ್ಲಿ ಕಸಬಾ, ಕುರಬಗೇರಿ ಓಣಿ ಮತ್ತು ಅರ್ಭಾಣ ಹಾಗೂ ದಂಡಾಪೂರ ಮತ್ತು ಸಿದ್ದವಿನಭಾವಿ ಓಣೆಗಳಲ್ಲಿ ಅಂತರ್ಜಲ ಹೆಚ್ಚಳದಿಂದ ಭೂಕುಸಿತಗೊಂಡು ಕಂದಕಗಳು ನಿರ್ಮಾಣವಾಗಿದೆ.

ನರಗುಂದದಿಂದ ಗುರ್ಲಕಟ್ಟಿ, ಕಣಕೀಕೊಪ್ಪ ಗ್ರಾಮಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿರುವ ಹಳೆ ಸೇತುವೆ ಆ. 8 ರಂದು ಕೊಚ್ಚಿ ಹೋಗಿದ್ದರಿಂದ ವಾಹನ ಸಂಚಾರ ತಟಸ್ಥಗೊಂಡು ಜನತೆ ತೊಂದರೆ ಪಡುವಂತಾಗಿದೆ. ಅರ್ಬಾಣ ಬಡಾವಣೆಯಲ್ಲಿರುವ ಪುರಸಭೆ ಸಿಬ್ಬಂದಿಯ ಅಣ್ಣಪ್ಪ ದೊಡಮನಿ ಎನ್ನುವವರ ಮನೆ ಆವರಣದಲ್ಲಿ ಬ್ರಹತ್ ತಗ್ಗು ಬಿದ್ದಿದ್ದು, ಮನೆಯ ಒಂದು ಭಾಗದ ಗೋಡೆ ಕುಸಿದಿದೆ.

ಈ ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಹಾಗೂ ತಹಶೀಲ್ದಾರ ಎ.ಎಚ್. ಮಹೇಂದ್ರ ಹಾಗೂ ಡಿವೈಎಸ್‌ಪಿ ಶಿವಾನಂದ ಕಟಗಿ ಮತ್ತು ಸಿಪಿಐ ಡಿ.ಬಿ. ಪಾಟೀಲ ಭೇಟಿ ನೀಡಿ ಪರಶೀಲನೆ ಕೈಗೊಂಡಿದ್ದಾರೆ. ಗ್ರಾಮ ಲೆಕ್ಕಿಗರು ಬಿದ್ದ ಮನೆಗಳ ಸರ್ವೇಕಾರ್ಯ ನಡೆಸುತ್ತಿದ್ದು ಶೀಘ್ರ ಕಂದಾಯ ಇಲಾಖೆಗೆ ವರದಿ ಸಲ್ಲಿಸುವ ಭರವಸೆ ನೀಡಿದರು.

ನರಗುಂದ ಕಣಕೀಕೊಪ್ಪ ರಸ್ತೆಯಲ್ಲಿಯ ಕಿರು ಸೇತುವೆ ಸಂಪೂರ್ಣ ಮಳೆಯಿಂದ ಹಾನಿಗೊಂಡು ಸಂಚಾರ ಸ್ಥಗಿತಗೊಂಡಿದೆ. ಲೋಕೋಪಯೋಗಿ ಇಲಾಖೆಯಿಂದ ಗರ್ಸಹಾಕಿ ಪೈಪ್‌ಗಳನ್ನು ಸೇತುವೆಗೆ ಅಳವಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಸತೀಶ ನಾಗನೂರ ತಿಳಿಸಿದ್ದಾರೆ.

Related