ರಾಜ್ಯ ಸರ್ಕಾರದ ವಿರುದ್ದ ಹೆಚ್ಡಿಕೆ ವಾಗ್ದಾಳಿ

ರಾಜ್ಯ ಸರ್ಕಾರದ ವಿರುದ್ದ ಹೆಚ್ಡಿಕೆ ವಾಗ್ದಾಳಿ

ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರ, ಆ ಮೂಲಕ ತಾನು ಕೊಳ್ಳೆ ಮತ್ತು ಲೂಟಿ ಹೊಡೆಯವವರ ಪರ ಎಂಬ ಸಂದೇಶ ನೀಡಿದೆ ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ಈಗಾಗಲೇ ಹೈಕೋರ್ಟ್ ನಲ್ಲಿ ಎರಡು ಬಾರಿ ಚರ್ಚೆಯಾಗಿದೆ. ಎರಡು ಅರ್ಜಿ ಪ್ರಕರಣ ವಜಾಗೊಳಿಸಲು ಎರಡು ಸಲ ಅರ್ಜಿ ಸಲ್ಲಿಸಿದರೂ ಆಗಿರಲಿಲ್ಲ. ಇಂತಹ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಹಲವು ತೀರ್ಪುಗಳು ಕಣ್ಣ ಮುಂದಿವೆ.
ಕಾನೂನನ್ನು ಧಿಕ್ಕರಿಸಿರುವ ಸರ್ಕಾರ, ನಾವು ಕಾನೂನಿಗಿಂತ ದೊಡ್ಡವರು ಎಂಬುದನ್ನು ಪ್ರದರ್ಶಿಸಿದೆ. ಸರ್ಕಾರದಲ್ಲಿ ಬಡವರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಕಿಡಿಕಾರಿದರು.

ಅನುಮತಿ ಹಿಂಪಡೆಯುವುದಕ್ಕಾಗಿ ಮೂರು ದಿನಗಳ ಹಿಂದೆ ಹಿರಿಯ ವಕೀಲರನ್ನು ಕರೆದು, ಮುಂದೆ ಯಾವ ರೀತಿ ರಕ್ಷಣೆ ಪಡೆಯಬೇಕು ಎಂಬುದನ್ನು ದಿನವಿಡೀ ಚರ್ಚಿಸಲಾಗಿದೆ. ಸರ್ಕಾರದ ತೀರ್ಮಾನ ರಾಷ್ಟ್ರಮಟ್ಟದಲ್ಲಿ ಕಾನೂನು ತಜ್ಞರ ಮಟ್ಟದಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.

ಪ್ರಕರಣ ಹಿಂಪಡೆಯಲು ಡಿಕೆಶಿ ಒತ್ತಡ ಹಾಕಿದ್ದರೇ, ಇಲ್ಲವೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಸರ್ಕಾರ ಇರುವುದೇ ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಲು. ತಿಳಿವಳಿಕೆ ಇರುವವರೇ ಇಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಒಂದು ಬಾರಿ ಆದೇಶ ಮಾಡಿದ ಮೇಲೆ ಬದಲಾವಣೆ ಮಾಡಲು ಅವಕಾಶವಿಲ್ಲ. ಸಿಬಿಐಬಿಂದ ವಾಪಸ್ಸು ಪಡೆದು ಲೋಕಾಯುಕ್ತ ಅಥವಾ ಸ್ಥಳೀಯ ಪೊಲೀಸರಿಂದ ಇದನ್ನ ತನಿಖೆ ಮಾಡಲು ಆಗುತ್ತದೆಯೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Related