ವರ್ಚಆಚರಣೆಗೆ ಮಾರ್ಗಸೂಚಿ

ವರ್ಚಆಚರಣೆಗೆ ಮಾರ್ಗಸೂಚಿ

ಬೆಂಗಳೂರು : ಹೊಸ ವರ್ಷಾಚರಣೆ ಸಂದರ್ಭದಲ್ಲಿ ರೂಪಾಂತರಗೊಂಡ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವ ಸಾಧ್ಯತೆ ಇರುವುದರಿಂದ ನಿರ್ಬಂಧ ಹಾಕಲು ಭಾನುವಾರ ಅಥವಾ ಸೋಮವಾರ ನೂತನ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದಿಂದ ಕೊರೋನಾ ನಮ್ಮೆಲ್ಲರನ್ನೂ ಕಾಡಿತ್ತು. ಈಗ ಒಂದು ಹಂತಕ್ಕೆ ಬರುತ್ತಿರುವ ಸಂದರ್ಭದಲ್ಲೇ ಹೊಸ ಮಾದರಿಯ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ತಂದಿದೆ ಎಂದು ಹೇಳಿದರು. ಸೋಂಕು ಹಬ್ಬುವುದನ್ನು ತಡೆಗಟ್ಟುವ ಉದ್ದೇಶದಿಂದಲೇ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವ ಕುರಿತು ಮಾರ್ಗಸೂಚಿಗಳ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ನಗರ ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರು ಚರ್ಚೆ ನಡೆಸಿ ಮಾರ್ಗಸೂಚಿ ಹೊರಡಿಸುತ್ತಾರೆ ಎಂದು ತಿಳಿಸಿದರು.

ಯುರೋಪ್ ದೇಶಗಳಿಂದ ಬಂದವರಿಗೆ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದರು. ಈಗಾಗಲೇ ವಿದೇಶದಿಂದ ಬಂದವರನ್ನು ಪತ್ತೆ ಮಾಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ವಿದೇಶದಿಂದ ಬಂದವರು ಕೂಡ ನಮಗೆ ಸಹಕಾರ ನೀಡಬೇಕೆಂದು ಬೊಮ್ಮಾಯಿ ಮನವಿ ಮಾಡಿದರು.

ಖ್ಯಾತ ಚಲನಚಿತ್ರ ನಟ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಗರ ಪೊಲೀಸ್ ಆಯುಕ್ತರು ಇದರ ಬಗ್ಗೆ ಮಾತನಾಡಿದ್ದಾರೆ. ಯಾಕಾಯ್ತು? ಏನಾಯ್ತು? ಎಂಬುದರ ಸಂಪೂರ್ಣ ಬಗ್ಗೆ ಮಾಹಿತಿ ಪಡೆದುಕೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Related