ಸಂವಿಧಾನದಡಿಯಲ್ಲಿ ಮೂಲಭೂತ ಸೌಕರ್ಯ ನೀಡುವುದು ಸರ್ಕಾರದ ಜವಾಬ್ದಾರಿ: ಸಚಿವ ಬೋಸರಾಜು

ಸಂವಿಧಾನದಡಿಯಲ್ಲಿ ಮೂಲಭೂತ ಸೌಕರ್ಯ ನೀಡುವುದು ಸರ್ಕಾರದ ಜವಾಬ್ದಾರಿ: ಸಚಿವ ಬೋಸರಾಜು

ರಾಯಚೂರು: ಹಿಂದೆ ಕೆಲವು ಸರ್ಕಾರಗಳು ಜನರಿಗೆ ಮೂಲಭೂತ ಸೌಕಾರಗಳನ್ನು ಕೊಡುವುದರಲ್ಲಿ ವಿಫಲವಾಗಿವೆ. ರಾಜ್ಯದ ಜನತೆಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ಆಯಾ ಸರ್ಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಪಾರದರ್ಶಕವಾಗಿ ನೀಡಲು ಅಧಿಕಾರಿಗಳು ಶ್ರಮಿಸಬೇಕೆಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಅವರು ಗುರುಗುಂಟಾ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್, ಲಿಂಗಸೂಗೂರು ತಾಲೂಕು ಪಂಚಾಯತ್ ಹಾಗೂ ಗುರುಗುಂಟಾ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಶ್ಯಾಮ್ ಪ್ರಸಾದ ರೂರ್ ಬನ್ ಯೋಜನೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ವಿವಿಧ ಯೋಜನೆಗಳ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದಿಂದ ಜನರ ಹಾಗೂ ಬಡವರ ಸಬಲೀಕರಣಕ್ಕಾಗಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಈಗಾಗಲೇ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವನಿಧಿ ಸೇರಿದಂತೆ ರಾಜ್ಯದ ಜನರಿಗೆ ನೀಡಿದೆ. ಜನರು ಈ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ತಮ್ಮ ಜಿಲ್ಲೆ, ತಾಲೂಕು ಹಾಗೂ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ತಿಳಿಸಿದರು.

ಇದೇ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಮಾತನಾಡಿ, ನಗರ ಪ್ರದೇಶಗಳಲ್ಲಿರುವಂತೆಯೇ ಗ್ರಾಮೀಣ ಭಾಗದಲ್ಲೂ ಸರ್ಕಾರದ ಸೌಲಭ್ಯಗಳು ಲಭ್ಯವಾಗುತ್ತಿದ್ದು, ಜನರು ಹೆಚ್ಚಿನ ರೀತಿಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲಿಂಗಸೂಗೂರು ಶಾಸಕ ಡಿ.ಮಾನಪ್ಪ ವಜ್ಜಲ್, ಗುರುಗುಂಟಾ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಣಿ ತಾರಾ, ದೇವರಬೂಪೂರು ಗ್ರಾ.ಪಂ.ಅಧ್ಯಕ್ಷ ದೇವಪ್ಪ, ಲಿಂಗಸೂಗೂರು ಸಹಾಯಕ ಆಯುಕ್ತ ಶಿಂಧೆ ಅವಿನಾಶ, ಸಿಪಿಐ ದತ್ತಾತ್ರೇಯ ಕಾರ್ನಾಡ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕರಿ ಡಾ.ಟಿ.ರೋಣಿ, ಲಿಂಗಸೂಗೂರು ತಾಲೂಕು ಪಂಚಾಯತ್ ಇಒ ಅಮರೇಶ ಯಾದವ ಸೇರಿದಂತೆ ಇತರರು ಇದ್ದರು.

(ವರದಿಗಾರ,ಎ ಚಿದಾನಂದ)

Related