ಅಕ್ಕನ ಹೋರಾಟಕ್ಕೆ ನ್ಯಾಯ ಕೊಡಿ

  • In State
  • February 14, 2020
  • 437 Views
ಅಕ್ಕನ ಹೋರಾಟಕ್ಕೆ ನ್ಯಾಯ ಕೊಡಿ

ಹುಬ್ಬಳ್ಳಿ, ಫೆ. 14:  ಡಾ. ಸರೋಜಿನಿ ಮಹಿಷಿ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೆ ತರುವಂತೆ ಆಗ್ರಹಿಸಿ ಹೋರಾಟ ಪುನರಾರಂಭಗೊಂಡಿರುವ ಬೆನ್ನಲ್ಲೇ ಡಾ. ಮಹಿಷಿಯವರ ಶ್ರಮಕ್ಕೆ ಪ್ರತಿಫಲ ಸಿಗುವುದು ಯಾವಾಗ? ಎಂದು ಅವರ ಕುಟುಂಬದವರು ಪ್ರಶ್ನಿಸುತ್ತಿದ್ದಾರೆ.

ಡಾ. ಸರೋಜಿನಿ ಮಹಿಷಿಯವರ ಸೋದರಿ, ಹಿರಿಯ ವಕೀಲೆ ಸಾವಿತ್ರಿಯವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನನ್ನ ಅಕ್ಕನ ಶ್ರಮಕ್ಕೆ ಇನ್ನೂ ಬೆಲೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಕ್ಕನ ಕಷ್ಟ ನೆನೆದ ಸೋದರಿ: ನಮ್ಮ ಅಕ್ಕ ಬಹಳ ಪರಿಶ್ರಮ ವಹಿಸಿ ವರದಿ ಸಿದ್ಧಪಡಿಸಿದ್ದರು. 2 ವರ್ಷ ಇಡೀ ಕರ್ನಾಟಕವನ್ನು ಈ ವರದಿಗಾಗಿ ಅವರು ಪ್ರವಾಸ ಮಾಡಿದ್ದಾರೆ. ಬೇರೆ ಬೇರೆ ಪ್ರದೇಶ, ರಾಜ್ಯಗಳಿಗೆ ಹೋಗಿ ಅಲ್ಲಿನ ಸರ್ಕಾರಗಳು ಸ್ಥಳೀಯರಿಗೆ ನೀಡುತ್ತಿರುವ ಉದ್ಯೋಗಾವಕಾಶಗಳು, ಅದರಿಂದ ಆಗಿರುವ ಅಭಿವೃದ್ಧಿ, ಆರ್ಥಿಕ ಸುಧಾರಣೆಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿದ್ದರು. ಒಟ್ಟು 3 ವರ್ಷ ಕಾಲ ನನ್ನ ಅಕ್ಕ ಈ ವರದಿಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡು ಕೆಲಸ ಮಾಡಿದ್ದಾರೆ. ವರದಿಯಲ್ಲಿ ನಮ್ಮ ರಾಜ್ಯದ ಭವಿಷ್ಯ ಕೂಡ ಅಡಗಿದೆ. ಆದರೆ ವರದಿ ಜಾರಿಗೆ ಮಾತ್ರ ಸರ್ಕಾರಗಳು ಆಸಕ್ತಿ ವಹಿಸಿಲ್ಲ ಎಂದರು.

ನನ್ನಕ್ಕನಿಗೆ ಯಾವುದೇ ಕೆಲಸ ಕೊಟ್ಟರೂ ಅದರಲ್ಲಿ ತನ್ನನ್ನೇ ತಾನು ಮರೆತು ಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದಳು. ಅವಳು ಮಾಡಿದ ಕೆಲಸಗಳು ಸಾಕಷ್ಟಿವೆ. ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ರಾಜ್ಯದ ನಿರುದ್ಯೋಗ ಸಮಸ್ಯೆ ನಿವಾರಿಸುವ ಪ್ರಮುಖ ಅಂಶ ಇದೆ ಎಂಬುದು ಗಮನಾರ್ಹ ಎಂದರು.

ಡಾ. ಸರೋಜಿನಿಯವರು ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದಾಗ ಅದೇ ಮಟ್ಟದ ಸ್ಪಂದನೆಯನ್ನು ಸರ್ಕಾರದಿಂದಲೂ ನಿರೀಕ್ಷಿಸಿದ್ದರು. ಹಂತ ಹಂತವಾಗಿಯೂ ವರದಿ ಜಾರಿಯಾಗಲಿಲ್ಲ ಎಂದು ತೀವ್ರ ವ್ಯಥೆ ಪಟ್ಟುಕೊಳ್ಳುತ್ತಿದ್ದರು ಎಂದು ಸಾವಿತ್ರಿ ಮಹಿಷಿ ಸ್ಮರಿಸಿಕೊಂಡು ಭಾವುಕರಾದರು. ಜನಪ್ರತಿನಿಧಿಗಳು ಆಗಾಗ ವರದಿ ಪ್ರಸ್ತಾಪಿಸಿ ಮಾತನಾಡುತ್ತಿರುತ್ತಾರೆ. ಬಳಿಕ ಮರೆತು ಬಿಡುತ್ತಾರೆ. ವರದಿ ಜಾರಿಗಾಗಿ ಹೋರಾಟಗಳು ನಡೆಯುತ್ತಿರುವುದಕ್ಕೆ ಸರ್ಕಾರವೇ ಹೊಣೆ. ಬಂದ್ ಕರೆಯಂಥ ಅನಿವಾರ್ಯತೆ ತಂದಿಟ್ಟಿರುವುದೇ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related