ಪರಿಶಿಷ್ಟ ಜಾತಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ: ಅಂಜು ಬಾಲಾ

ಪರಿಶಿಷ್ಟ ಜಾತಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ: ಅಂಜು ಬಾಲಾ

ಬೆಂಗಳೂರು: ಪರಿಶಿಷ್ಟ ಜಾತಿಗೆ ಸೇರಿದ ಸ್ವಯಂ ಉದ್ಯೋಗ ಪ್ರಾರಂಭಿಸಲು ಬಯಸುವ ಮಹಿಳೆಯರನ್ನು ಬ್ಯಾಂಕ್ ಗಳು ಹೆಚ್ಚು ಪ್ರೋತ್ಸಾಹಿಸಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ ಡಾ. ಅಂಜು ಬಾಲಾ ಅಭಿಪ್ರಾಯ ಪಟ್ಟರು.

ಅವರು ಇಂದು ವಿಕಾಸಸೌಧದ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿ ಕುರಿತಂತೆ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ದೇಶದಾದ್ಯಂತ ಹಲವಾರು ಪರಿಶಿಷ್ಟ ಜಾತಿಯ ಪ್ರತಿಭಾನ್ವಿತ ಹೆಣ್ಣು ಮಕ್ಕಳು ಇಂದು ಸ್ವಯಂ ಉದ್ಯೋಗ ರೂಪಿಸಿಕೊಂಡು ತನ್ಮೂಲಕ ಇತರರಿಗೆ ಉದ್ಯೋಗ ಸೃಷ್ಟಿಸಲು ನೆರವಾಗುತ್ತಿದ್ದಾರೆ. ಅಂತಹ ಮಹಿಳೆಯರಿಗೆ ವಿಳಂಬ ಮಾಡದೆ ಬ್ಯಾಂಕುಗಳು ಸಾಲ ಒದಗಿಸಿ ಬೆಂಬಲಿಸಬೇಕು ಎಂದು ಅವರು ಸೂಚಿಸಿದರು.

ಸ್ಟ್ಯಾಂಡ್ ಅಪ್ ಇಂಡಿಯಾ, ಮುದ್ರಾ ಯೋಜನೆ ರೀತಿಯ  ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಪರಿಶಿಷ್ಟ ಜಾತಿಯ ಮಹಿಳಾ ಸಹಾಯ ಸಂಘಗಳಿಂದ ಸಾಲ ಸೌಲಭ್ಯಕ್ಕಾಗಿ ಬಂದಿರುವ ಅರ್ಜಿಗಳು ಹಾಗೂ ಅವುಗಳಲ್ಲಿ ಮಂಜೂರಾದ ಅರ್ಜಿಗಳ ಸಂಖ್ಯೆ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ದಾಖಲಾದ 161 ಪರಿಶಿಷ್ಟ ಜಾತಿ ವಿರುದ್ಧ ದೌರ್ಜನ್ಯ ಪ್ರಕರಣಗಳಲ್ಲಿ 67 ಪ್ರಕರಣಗಳು ಪುರಾವೆಗಳ ಕೊರತೆಯಿಂದಾಗಿ ಕೈ ಬಿಡಲಾಗಿದ್ದು, ಅವುಗಳ ಸೂಕ್ತ ಕಾರಣಗಳ ವರದಿಯನ್ನು ಸಲ್ಲಿಸುವಂತೆ ಪೊಲೀಸ್ ಉಪಯುಕ್ತರಾದ ಡಾ. ಶರಣಪ್ಪ ಅವರಿಗೆ ಸೂಚಿಸಿದ ಅವರು, ಇಷ್ಟು ಪ್ರಮಾಣದಲ್ಲಿ ಸುಳ್ಳು ಪ್ರಕರಣಗಳು ದಾಖಲಾಗಲು ಸಾಧ್ಯವಿಲ್ಲ. ಈ ಬಗ್ಗೆ ತಮಗೆ ವಿವರಣಾತ್ಮಕ ವರದಿ ನೀಡಬೇಕೆಂದು ಅವರು ಸೂಚಿಸಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿ, ಜನನಿ ಸುರಕ್ಷಾ ಯೋಜನೆ ಅಡಿ ಆರೋಗ್ಯ ಇಲಾಖೆಯಿಂದ ನೀಡಲಾಗುವ ನೆರವಿಗೆ ಪೂರಕವಾಗಿ ತಾಯಿ ಕಾರ್ಡಿನಲ್ಲಿ ಗರ್ಭಿಣಿಯರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಅಂಶ ನಮೂದಿಸುತ್ತಿರುವುದರಿಂದ ಫಲಾನುಭವಿಯನ್ನು ಗುರುತಿಸಲು ಸುಲಭವಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದವರಿಗೆ ನೀಡಲಾಗುವ ಸೌಲಭ್ಯಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಅನುಕೂಲವಾಗಿದೆ ಎಂದು ಶ್ಲಾಘಿಸಿದ ಅವರು ಈ ಮಾದರಿಯನ್ನು ಇತರೆ ರಾಜ್ಯಗಳಲ್ಲಿಯೂ ಅನುಸರಿಸಲು ಸಲಹೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಜಿಲ್ಲೆಯಲ್ಲಿ ನೀಡಿರುವ ಗುರಿ ಮತ್ತು ಸಾಧನೆ ಕುರಿತು ಸ್ಥಳ ಪರಿಶೀಲನೆ ನಡೆಸಿ ವಸ್ತು ಸ್ಥಿತಿ ಅವಲೋಕಿಸಲು ಆಯೋಗದ ರಾಜ್ಯ ಉಸ್ತುವಾರಿ ಅಧಿಕಾರಿ ಕಲಾವತಿಯವರಿಗೆ ಅಂಜು ಬಾಲಾ ಅವರು ಸೂಚಿಸಿದರು.

ಪರಿಶಿಷ್ಟ ಜಾತಿ ಸಮುದಾಯದ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸರಬರಾಜು ಆಗುತ್ತಿರುವ ಬಗ್ಗೆ ಕೂಡಲೇ ಸಮರ್ಪಕ ವರದಿ ತಯಾರಿಸಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಅವರು ಸೂಚಿಸಿದರು.

ಸಭೆಯಲ್ಲಿ ಆಯೋಗದ ನಿರ್ದೇಶಕರಾದ ಎಸ್. ಕೆ ಸಿಂಗ್. ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related