ಹಸಿ ಬೆಳ್ಳುಳ್ಳಿ, ಜೇನಿನ ಮಿಶ್ರಣ ತಿನ್ನಿ, ತೂಕ ಇಳಿಸಿ

ಹಸಿ ಬೆಳ್ಳುಳ್ಳಿ, ಜೇನಿನ ಮಿಶ್ರಣ ತಿನ್ನಿ, ತೂಕ ಇಳಿಸಿ

ಬೆಳ್ಳುಳ್ಳಿ ಇದು ನಾವು ದಿನನಿತ್ಯ ಅಡುಗೆಯಲ್ಲಿ ಬಳಸುವ ಪದಾರ್ಥ. ಬೆಳ್ಳುಳ್ಳಿಯ ಒಗ್ಗರಣೆ ಇಲ್ಲದಿದ್ದರೆ ಅಡುಗೆ ರುಚಿಸುವುದಿಲ್ಲ ಎಂಬ ಮಟ್ಟಿಗೆ ನಮ್ಮ ಅಡುಗೆಯಲ್ಲಿ ಬೆರೆತುಹೋಗಿದೆ.

ಇದು ತೂಕ ಇಳಿಸುವ ಅದ್ಭುತ ಗುಣಗಳನ್ನು ಹೊಂದಿದ್ದು, ವಿಟಮಿನ್ ಬಿ 6 ಮತ್ತು ಸಿ, ಕರಗುವ ನಾರು, ಮ್ಯಾಂಗನೀಸ್, ಕ್ಯಾಲ್ಸಿಯಂನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ. ವಿಶೇಷವಾಗಿ ಸೊಂಟದ ಕೊಬ್ಬನ್ನು ಬೇಗನೆ ಕರಗಿಸುವುದರಿಂದ ಇದರ ಪಾತ್ರ ಪ್ರಧಾನವಾಗಿದೆ. ಹಾಗಾಗಿ ಇದನ್ನು ಸುಪರ್ ಫುಡ್ ಎಂದು ಕರೆಯುತ್ತಾರೆ.

ದೇಹ ತೂಕ ಇಳಿಕೆಯಲ್ಲಿ ಮುಖ್ಯ ಪಾತ್ರ ವಹಿಸುವ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವುದು ಬಲು ಕಷ್ಟ. ಆದರೆ ಹಸಿ ಬೆಳ್ಳುಳ್ಳಿಯನ್ನು ಸೇವನೆ ತೂಕ ಇಳಿಕೆಯ ಮತ್ತೊಂದು ರಹಸ್ಯ ಎಂದರೆ ತಪ್ಪಾಗಲಾರದು. ತೂಕ ಇಳಿಕೆಗಾಗಿ ಬೆಳಿಗ್ಗೆ ಎದ್ದ ತಕ್ಷಣ ದಿನದ ಮೊದಲ ಆಹಾರವಾಗಿ ಬೆಚ್ಚಗಿನ ನೀರನ್ನು ಕುಡಿಯುವುದು, ನಿಂಬೆ ಮತ್ತು ಜೇನುತುಪ್ಪವನ್ನು ಸೇವಿಸುವುದು ಹೀಗೆ ಮುಂತಾದ ಕ್ರಮಗಳ ಮಧ್ಯೆ ಹಸಿ ಬೆಳ್ಳುಳ್ಳಿ ಸೇವನೆಯಿಂದಲೂ ಪ್ರಯೋಜನವಿದೆ.

ನೀವು ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಹಸಿ ಬೆಳ್ಳುಳ್ಳಿಯ ಎಸಳುಗಳನ್ನು ಸೇವಿಸುತ್ತಾ ಬಂದರೆ, ಅದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿಯೂ ಸುಧಾರಣೆ ಕಾಣಬಹುದು. ಉತ್ತಮ ರೋಗನಿರೋಧಕ ಶಕ್ತಿಯು ಹೆಚ್ಚಳವಾಗುತ್ತದೆ. ಆದರೆ ನೀವು ಬೆಳ್ಳುಳ್ಳಿಯೊಂದಿಗೆ ಜೇನುತುಪ್ಪ ಸೇವಿಸಿದರೆ ಇನ್ನು ಹೆಚ್ಚು ಲಾಭದಾಯಕವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೇನುತುಪ್ಪ ಹಸಿವನ್ನು ನಿಗ್ರಹಿಸುವ ಮೂಲಕ ಅನಗತ್ಯ ಆಹಾರ ಸೇವನೆಯನ್ನು ತಡೆಯುತ್ತದೆ. ದಿನವಿಡೀ ನಿಮ್ಮನ್ನು ಚೈತನ್ಯದಲ್ಲಿ ಇರಿಸಲು ನೆರವಾಗುತ್ತದೆ.

ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಟಾನಿಕ್ ತಯಾರಿಸುವುದು ಹೇಗೆ?
ಒಂದು ಗಾಜಿನ ಬಾಟಲಿಯಲ್ಲಿ ಅರ್ಧದಷ್ಟು ಸಾವಯವ ವಿಧಾನದ ಜೇನನ್ನು ತುಂಬಿಸಿ. ಕೆಲವು ಇಡೀ ಎಸಳು ಬೆಳ್ಳುಳ್ಳಿಗಳನ್ನು ಸುಲಿದು ಜೇನಿಗೆ ಹಾಕಿ. ಈ ಎಸಳುಗಳು ಜೇನಿನಲ್ಲಿ ಪೂರ್ಣವಾಗಿ ಮುಳುಗಬೇಕು. ನಂತರ ಭದ್ರವಾಗಿ ಮುಚ್ಚಳ ಹಾಕಿ ನೆರಳಿನಲ್ಲಿ ಒಂದು ತಿಂಗಳ ಕಾಲ ಹಾಗೇ ಇರಿಸಬೇಕು.

ಸೇವಿಸುವ ವಿಧಾನ: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಬಾಟಲಿಯಿಂದ ಒಂದೆರಡು ಎಸಳುಗಳನ್ನು ಹೊರತೆಗೆದು ಜಜ್ಜಿ ಸೇವಿಸಿ.

Related