ಶಿಥಿಲಗೊಂಡ ಕೊಠಡಿ ಸೋರುತಿರುವ ಬಿಸಿಯೂಟದ ಅಡುಗೆ ಕೋಣೆ..

ಶಿಥಿಲಗೊಂಡ ಕೊಠಡಿ ಸೋರುತಿರುವ ಬಿಸಿಯೂಟದ ಅಡುಗೆ ಕೋಣೆ..

ತಾಳಿಕೋಟಿ, ಆ 18: ಪಟ್ಟಣದಿಂದ ಕೇವಲ 8 ಕಿ.ಮೀ ಅಂತರದಲ್ಲಿರುವ ಗಡಿಸೋಮನಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ವರ್ಷಗಳಾದರೂ ಕೇಳುವವರೆ ಇಲ್ಲ ಎಂಬುದನ್ನು ನೋಡಿದರೆ ನಮ್ಮವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದು ತಿಳಿದು ಬರುತ್ತದೆ.

ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿರುವ ಈ ಗ್ರಾಮದ ಶಾಲೆಯಲ್ಲಿ ಒಟ್ಟು ೨೬೬ ವಿದ್ಯಾರ್ಥಿಗಳಿದ್ದು ೮ ಕೊಠಡಿಗಳಿವೆ ಇದರಲ್ಲಿ ೧ ಕೊಠಡಿ ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿದ್ದರೆ ಬಿಸಿಯೂಟದ ಕೋಣೆ ಸಂಪೂರ್ಣ ಬಿರುಕು ಬಿಟ್ಟು ಅಡುಗೆಯವರು ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುತ್ತಿದ್ದಾರೆ. ಶಾಲೆಯ ಆವರಣದಲ್ಲಿ ಬೋರವೆಲ್ ಇದೆ ಆದರೆ ಇದು ಕೆಟ್ಟುಹೋಗಿ ಹಲವಾರು ದಿನಗಳಾದರೂ ರಿಪೇರಿಯ ಭಾಗ್ಯ ಕಂಡಿಲ್ಲ. ಮಾಡಿಸುವ ಆಸಕ್ತಿ ಗ್ರಾಮ ಪಂಚಾಯತ್ ಅವರಿಗಿಲ್ಲ.

ಕುಡಿಯಲು ಮಕ್ಕಳು ಮನೆಯಿಂದಲೇ ನೀರು ತರಬೇಕು ಅದು ಮುಗಿದಾಗ ದಾಹದಲ್ಲಿಯೇ ಇರಬೇಕು ಮತ್ತೇ ಮನೆಗೆ ಹೋಗುವ ಹಾಗಿಲ್ಲ ಶೌಚಾಲಯವಿಲ್ಲದೆ ಮಕ್ಕಳು ಬಹಿರ್ದೆಸೆಗೆ ಪರದಾಡುವ ಸ್ಥಿತಿ ಇದೆ. ಇನ್ನೂ ಶಾಲೆಗೆ ತಮ್ಮ ಮನೆಗಳಿಂದ ಬರಲು ಮಕ್ಕಳಿಗಿರುವ ಮುಖ್ಯರಸ್ತೆ ಹಾಳಾಗಿ ಹೋಗಿದ್ದು ಮಳೆ ನೀರು ಹಾಗೂ ಚರಂಡಿಯ ಕೊಳಚೆ ಸಂಗ್ರಹವಾಗುತ್ತದೆ. ಮಕ್ಕಳು ಇದರಲ್ಲಿಯೇ ನಡೆದು ಬರಬೇಕು ಎಷ್ಟೋ ಬಾರಿ ಮಕ್ಕಳು ಜಾರಿ ಬಿದ್ದು ಗಾಯಾಳುವಾಗಿದ್ದಾರೆ.
ಈ ಶಾಲೆಯ ಸಮಸ್ಯೆಗಳ ಕುರಿತು ಇಲ್ಲಿಯ ಮುಖ್ಯ ಗುರುಗಳು ಹಲವಾರು ಬಾರಿ ಮನವಿಗಳನ್ನು ಮೇಲಾಧಿಕಾರಿಗಳಿಗೆ ಪಿಡಿಒ, ತಾ.ಪಂ. ಇಒಗೆ ಕೊಟ್ಟರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಬಹಳ ನಿರಾಶೆಯಿಂದ ತಿಳಿಸುತ್ತಾರೆ.

ಈ ಕ್ಷೇತ್ರದ ಶಾಸಕರ ಅವಧಿ ಕೊನೆಗೊಳ್ಳುತ್ತಿದ್ದರೂ ಈ ಗ್ರಾಮದ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ, ಎಂಬುದು ಇಲ್ಲಿರುವ ವಿವಿಧ ಸಂಘಟನೆಗಳ ಗಂಭೀರ ಆರೋಪವಾಗಿದೆ. ಅವರು ಈ ಕುರಿತು ಹೋರಾಟದ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಇದು ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಹೇಳುವ ಹಾಗಿಲ್ಲ ಹೀಗಾಗುವ ಮೊದಲೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Related