ಸತೀಶ್ ರೆಡ್ಡಿಗೆ ಸಚಿವ ಸ್ಥಾನಕ್ಕೆ ತಮಟೆ ಚಳುವಳಿ

ಸತೀಶ್ ರೆಡ್ಡಿಗೆ ಸಚಿವ ಸ್ಥಾನಕ್ಕೆ ತಮಟೆ ಚಳುವಳಿ

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಗೆದ್ದು ಜನಪರ ಕೆಲಸ ಮಾಡಿದ ಸತೀಶ್ ರೆಡ್ಡಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿ ಬೊಮ್ಮನಹಳ್ಳಿಯ ವಿವಿಧ ದಲಿತ ಸಂಘಟನೆಗಳಿಂದ ಸೋಮವಾರ ತಮಟೆ ಚಳುವಳಿ ನಡೆಸಲಾಯಿತು.

ಸತೀಶ್ ರೆಡ್ಡಿ ಅವರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮನೆ ಮಗನಾಗಿದ್ದಾರೆ. ದಲಿತರು, ಸಾಮಾನ್ಯ ಜನತೆ ಹಾಗೂ ಮಹಿಳೆಯರೂ ಸೇರಿದಂತೆ ಇತರೆ ಸಮುದಾಯದವರೊಂದಿಗೆ ಸಾಮಾನ್ಯ ಕಾರ್ಯಕರ್ತನಂತೆ ಬೆರೆತು ಪಕ್ಷ ಸಂಘಟನೆ ಮಾಡಿದ್ದಾರೆ. ಜಾತಿ ಬೇಧವಿಲ್ಲದೆ, ಎಲ್ಲರ ಕಷ್ಟಗಳಿಗೂ ಭಾಗಿಯಾದ ಸತೀಶ್ ರೆಡ್ಡಿಗೆ ಸಚಿವ ಸ್ಥಾನ ನೀಡಲೇ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡುತ್ತೇವೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಜೆ. ಚಂದ್ರಪ್ಪ ಹೇಳಿದ್ದಾರೆ.

30 ವರ್ಷದಿಂದ ಕ್ಷೇತ್ರದಲ್ಲಿ ಬಿಜೆಪಿಯ ಆಡಳಿತ ಇರಲಿಲ್ಲ. ಜೆಡಿಎಸ್, ಕಾಂಗ್ರೆಸ್ ಪಕ್ಷದ ಆಡಳಿತವಿತ್ತು. ಇದೀಗ ಬಿಜೆಪಿಯನ್ನು ಬೆಳೆಸಿದ ಕೀರ್ತಿ ಸತೀಶ್ ರೆಡ್ಡಿಗೆ ಸಲ್ಲುತ್ತದೆ. ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾದ ಅವರು 9 ಕಾರ್ಪೊರೇಟರ್, ಎಂ.ಪಿಗಳನ್ನು ನಾಲ್ಕು ಬಾರಿ ಚುನಾಯಿಸುವಲ್ಲಿ ಹಾಗೂ ಆರ್ ಅಶೋಕ್ ಅವರನ್ನು ನಾಲ್ಕು ಬಾರಿ ಶಾಸಕರಾಗಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಪಕ್ಷವನ್ನು ಸಂಘಟಿಸುವುದರ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಗೆಲುವಿಗೆ ಕಾರಣರಾದವರು ಸತೀಶ್ ರೆಡ್ಡಿ. ಅವರಿಗೆ ಸಚಿವ ಸ್ಥಾನ ನೀಡಲೇ ಬೇಕೆಂದು ದಲಿತ ಸಂಘಟನೆಯ ನಾಯಕ ರಾಜಪ್ಪ ಸರ್ಕಾರವನ್ನು ಆಗ್ರಹಿಸಿದರು.

ಕೋವಿಡ್ ಸಂದರ್ಭದಲ್ಲಿ ಜನರ ನೋವಿಗೆ ಸ್ಪಂದಿಸಿದ್ದಾರೆ. ಲಾಕ್‍ಡೌನ್ ವೇಳೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕ್ಷೇತ್ರದ ಬಡವರಿಗೆ ಉಚಿತ ಆಹಾರದ ಕಿಟ್‍ಗಳನ್ನು ನೀಡಿದ್ದಾರೆ. ಜನರಿಗೆ ಬೆಡ್ ಸಿಗದಿದ್ದಾಗ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ ಸತೀಶ್ ರೆಡ್ಡಿಗೆ ಸಚಿವ ಸ್ಥಾನ ನೀಡಬೇಕೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾಜಿ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮೀ ಮುರಳಿ ಸಿ.ಎಂ ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದಲಿತ ಸಂಘಟನೆಗಳು ನಡೆಸಿದ ತಮಟೆ ಚಳುವಳಿಯಲ್ಲಿ ಸಾವಿರಕ್ಕೂ ಹೆಚ್ಚು ದಲಿತ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಪ್ರತಿಭಟನಕಾರರು ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬೊಮ್ಮನಹಳ್ಳಿಯಿಂದ ಸಿಲ್ಕ್ ಬೋರ್ಡ್ ವರೆಗೆ ರ‍್ಯಾಲಿ ನಡೆಸಿದರು. ದಲಿತ ಮುಖಂಡರುಗಳಾದ ಡಿ.ಎಸ್.ಎಸ್ ಚಂದ್ರಪ್ಪ, ರಾಜಪ್ಪ, ಸುನಂದಪ್ಪ, ಮಾಜಿ ಪಾಲಿಕೆ ಸದಸ್ಯೆ ಭಾಗ್ಯ ಲಕ್ಷ್ಮೀ ಮುರಳಿ, ಮಾಜಿ ನಗರ ಸಭಾ ಸದಸ್ಯ ಮುನಿರಾಜ್ ಹಾಗು ರವಿಶಂಕರ್ ಮುಂತಾದವರು ಭಾಗವಹಿಸಿದ್ದರು.

Related