ಕೆರೆ ಒತ್ತುವರಿ ತೆರವು ಜಿಲ್ಲಾಡಳಿತ ವಿಫಲ

ಕೆರೆ ಒತ್ತುವರಿ ತೆರವು ಜಿಲ್ಲಾಡಳಿತ ವಿಫಲ

ಪ್ರಜಾವಾಹಿನಿ-ತುಮಕೂರು : ನಗರದ ಬಡ್ಡಿಹಳ್ಳಿ ಕೆರೆ ಭೂಗಳ್ಳರಿಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಕೆರೆ ಅಂಗಳಕ್ಕೆ ಮಣ್ಣು ಸುರಿದು ಸಮತಟ್ಟು ಮಾಡಿ ಕಬಳಿಸುವ ಪ್ರಯತ್ನ ನಡೆಸುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ.
ಬಡ್ಡಿಹಳ್ಳಿ ಕೆರೆ ಒತ್ತುವರಿ ವಿರುದ್ಧ ಸಾರ್ವಜನಿಕರೇ ಕಾನೂನು ಹೋರಾಟಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕ್ಯಾತಸಂದ್ರದ ೩೨, ೩೩ನೇ ವಾರ್ಡ್ಗೆ ಹೊಂದಿಕೊAಡಿರುವ ಕೆರೆ ಮೇಲೆ ಈಗ ಭೂಗಳ್ಳರು ಕಣ್ಣು ಹಾಕಿದ್ದು ಕೆರೆ ಒಳಪಟ್ಟಿರುವ ಸರ್ವೇ ನಂ.೧೭/೧ರ ೪.೨೧ ಎಕರೆ ಜಾಗ ಅಭಿವೃದ್ಧಿಪಡಿಸಿ ‘ನುಂಗುವ’ ಹುನ್ನಾರ ನಡೆದಿದೆ. ಕೆರೆ ಸಂರಕ್ಷಣೆ ಮಾಡುವ ಪಾಲಿಕೆ ಅಧಿಕಾರಿಗಳೇ ಭೂಗಳ್ಳರ ಜತೆ ಶಾಮೀಲಾಗಿರುವುದು ರಹಸ್ಯವಾಗೇನು ಉಳಿದಿಲ್ಲ.
ಕ್ಯಾತಸಂದ್ರ, ಬಡ್ಡಿಹಳ್ಳಿ, ಶೆಟ್ಟಿಹಳ್ಳಿ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗಿರುವ ಕೆರೆ ೪೬ ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿದೆ. ಈ ಕೆರೆ ಅಂಗಳದ ಮೇಲೆ ಭೂಗಳ್ಳರ ಕಣ್ಣುಬಿದ್ದಿದ್ದು ಸ್ಥಳೀಯ ಕಾರ್ಪೋರೇಟರ್ ಆಗಲಿ, ಪಾಲಿಕೆ ಅಧಿಕಾರಿಗಳಾಗಲಿ ಇತ್ತ ಸುಳಿಯದಿರುವುದು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ‘ವಿಜಯವಾಣಿ’ ಬಡ್ಡಿಹಳ್ಳಿ ಕೆರೆ ಒತ್ತುವರಿ ಬಗ್ಗೆ ಬೆಳಕು ಚೆಲ್ಲಿತ್ತು.
ಯಾವ್ಯಾವ ಕೆರೆಗಳ ಸರ್ವೇ
ಮಹಾನಗರ ಪಾಲಿಕೆ ವ್ಯಾಪ್ತಿಯ ಮೈದಾಳ ಕೆರೆ, ಕ್ಯಾತಸಂದ್ರದ ಗುಂಡ್ಲಮ್ಮ ಕೆರೆ, ಬಡ್ಡಿಹಳ್ಳಿ ಕೆರೆ, ಶೆಟ್ಟಿಹಳ್ಳಿ ಕೆರೆ, ಉತ್ತರಕಟ್ಟೆ, ಗಾರೆನರಸಯ್ಯನಕಟ್ಟೆ, ಗೂಳರಿವೆ ಕೆರೆ, ಮರಳೂರು ಕೆರೆ ಹಾಗೂ ಅಳಶೆಟ್ಟಿಕೆರೆ ಒತ್ತುವರಿಯಾಗಿರುವ ಬಗ್ಗೆ ದೂರುಗಳು ಬಂದಿದ್ದು ಈ ಸರ್ವೇ ವರದಿಯನ್ನು ಪಾಲಿಗೆ ಇನ್ನೂ ಬಹಿರಂಗಪಡಿಸಿಲ್ಲ. ವರದಿ ಹೊರಬಿದ್ದಲ್ಲಿ ಸತ್ಯಾಸತ್ಯತೆ ಹೊರಬೀಳಲಿದೆ.
ಕೆರೆ ಅಭಿವೃದ್ಧಿಗೆ ತಡೆಯಾಜ್ಞೆ
ಬಡ್ಡಿಹಳ್ಳಿ ಕೆರೆ ಅಂಗಳದಲ್ಲಿ ಕಾನೂನುಬಾಹಿರವಾಗಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಇದರ ವಿರುದ್ಧ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಸ್ಥಳೀಯ ನಿವಾಸಿಗಳು ದೂರು ದಾಖಲಿಸಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರಿಗೂ ಹಲವು ಬಾರಿ ಅಭಿವೃದ್ಧಿ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ಕೆರೆ ಅಂಗಳದಲ್ಲಿ ಕೈಗೊಂಡಿರುವ ಕಾಮಗಾರಿ ನಿಲ್ಲಿಸುವಂತೆ ಮನವಿ ಮಾಡಿದ್ದರು. ಈ ದೂರಿನ ವಿಚಾರಣೆ ನಡೆಸಿರುವ ತುಮಕೂರು ಉಪವಿಭಾಗಾಧಿಕಾರಿ ಸಿ.ಎಲ್.ಶಿವಕುಮಾರ್ ಮುಂದಿನ ವಿಚಾರಣೆವರೆಗೂ ಕೆರೆ ಅಭಿವೃದ್ಧಿಗೆ ತಡೆಯಾಜ್ಞೆ ನೀಡಿ ಜ.೧೪ ರಂದು ಆದೇಶ ನೀಡಿದ್ದಾರೆ.
ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ
ಕೆರೆ-ಕಟ್ಟೆಗಳು, ಜಲಮೂಲಗಳನ್ನು ಸಂರಕ್ಷಿಸುವAತೆ ಸುಪ್ರೀಂಕೋರ್ಟ್ ಆದೇಶವಿದ್ದರೂ ರಾಜಾರೋಷವಾಗಿ ಕ್ಯಾತ್ಸಂದ್ರದ ಬಡ್ಡಿಹಳ್ಳಿ ಕೆರೆ ಅಂಗಳದಲ್ಲೇ ಕಟ್ಟಡ ತ್ಯಾಜ್ಯ, ಮಣ್ಣು ಸುರಿದು ಕಾನೂನುಬಾಹಿರವಾಗಿ ಪ್ರಭಾವಿಗಳು ಕಬಳಿಸಲು ಹೊರಟಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ವಿಪರ್ಯಾಸ ಅಂದ್ರೆ ಭೂಗಳ್ಳರೊಂದಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಶಾಮೀಲಾಗಿದ್ದು, ಯಾವುದೇ ಕ್ರಮಕ್ಕೆ ಇದುವರೆಗೂ ಮುಂದಾಗದೇ ಇರುವುದು!
ರಕ್ಷಣೆಗೆ ಹದ್ದುಬಸ್ತು
ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಕೆರೆಗಳ ಸಂರಕ್ಷಣೆಗೆ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ದಿಟ್ಟ ಕ್ರಮಕೈಕೊಂಡಿದ್ದಾರೆ. ಪಾಲಿಕೆ ವ್ಯಾಪ್ತಿಯ ೧೧ ಕೆರೆಗಳ ಸರ್ವೇ ನಡೆಸಿ ‘ಹದ್ದುಬಸ್ತು’ ಮಾಡಿ ಭೂಗಳ್ಳರಿಂದ ರಕ್ಷಣೆಗೆ ಕ್ರಮವಹಿಸಲಾಗಿತ್ತು. ಕೆರೆಗಳ ಅಭಿವೃದ್ಧಿ, ರಕ್ಷಣೆಯಿಂದ ನಗರದ ಅಂತರ್ಜಲ ಹೆಚ್ಚಿಸಬಹುದಾಗಿದ್ದು ಕೆರೆಗಳ ಮೂಲ ನಕಾಶೆಯ ವಿಸ್ತೀರ್ಣದಂತೆ ಸರ್ವೇ ಮಾಡಿ ಹದ್ದುಬಸ್ತು ಗುರುತಿಸಲು ಭೂಮಾಪಕರನ್ನೂ ಸಹ ಈ ಹಿಂದೆ ನಿಯೋಜಿಸಲಾಗಿತ್ತು. ಆದರೂ, ನಗರ ವ್ಯಾಪ್ತಿಯ ಕೆರೆ ಒತ್ತುವರಿಗೆ ಮಾತ್ರ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

Related