ಕೊರೊನಾ ವಾರಿಯರ್ ಆಗಿ ತುಂಬು ಗರ್ಭಿಣಿ ತಹಶೀಲ್ದಾರ್!

ಕೊರೊನಾ ವಾರಿಯರ್ ಆಗಿ ತುಂಬು ಗರ್ಭಿಣಿ ತಹಶೀಲ್ದಾರ್!

ತಿಪಟೂರು: ತಾಲ್ಲೂಕಿನ ತಹಶೀಲ್ದಾರ್ ಆರತಿ ಅವರು ತುಂಬು ಗರ್ಭಿಣಿ ಎಂಬುದನ್ನು ಲೆಕ್ಕಿಸದೆ ಕೊರೊನಾ ಮಹಾಮಾರಿ ವಿರುದ್ಧ ಹಗಲು ಇರುಳೆನ್ನದೆ ದುಡಿಯುತ್ತಿರುವುದು ಸಾರ್ವಜನಿಕರ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಕೊರೊನಾ ಎಂಬ ಮಹಾಮಾರಿಗೆ ಇಡೀ ದೇಶವೇ ತತ್ತರಿಸುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವಂತಹ ಸಂದರ್ಭದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ನೀಡದೆ ಸಾರ್ವಜನಿಕರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ಕರ್ತವ್ಯಕ್ಕೆ ಹಾಜರಾಗಿ ಇಡೀ ತಾಲ್ಲೂಕಿನಾದ್ಯಂತ ಸಂಚರಿಸುತ್ತಾ ಕೋವಿಡ್-19 ವಿರುದ್ಧ ಪೊಲೀಸ್ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಗಳ ಸಹಕಾರದೊಂದಿಗೆ ಜನರ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ.

ತಿಪಟೂರು ಭಾಗದಲ್ಲಿ ಯಾವುದೇ ಕರೋನಾ ಪ್ರಕರಣಗಳು ಕಂಡು ಬಂದಿಲ್ಲ. ಆದರೂ ಹೊರಗಿನಿಂದ ಬರುವವರಿಗೆ ತಾವೇ ಖುದ್ದು ನಿಂತು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಸುಮಾರು 41 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಅವರನ್ನು ಕೊನೇಹಳ್ಳಿಯ ಶಾಲೆಯೊಂದಲ್ಲಿ ಇರಿಸಿ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ತಾಲ್ಲೂಕಿನ ಜನರಲ್ಲಿ ಭಯವನ್ನು ಹೋಗಲಾಡಿಸುವುದರಲ್ಲಿ ಯಶಸ್ವಿ ಆಗಿದ್ದಾರೆ.

ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದು ಲೋಪ ಕಂಡು ಬಂದ ಎರಡು ನ್ಯಾಯಬೆಲೆ ಅಂಗಡಿಗಳನ್ನು ರದ್ದು ಮಾಡುವಂತೆ ಆದೇಶಿಸಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ರೈತರಿಗೆ ವ್ಯಾಪಾರ ಮಾಡಲು ಅನುವು ಮಾಡಿಕೊಡುವಲ್ಲಿ ತಹಸೀಲ್ದಾರ್ ಅವರ ಪಾತ್ರ ಕೂಡ ದೊಡ್ಡದು ಎಂದು ಹೇಳಬಹುದು.

Related