ಕಾಂಗ್ರೆಸ್‌ ಗ್ಯಾರಂಟಿಗಳು ಬರೀ ಸುಳ್ಳಿನ ಕಂತೆಯಾಗಿದೆ: ಕೆಎಸ್‌ ಈಶ್ವರಪ್ಪ

ಕಾಂಗ್ರೆಸ್‌ ಗ್ಯಾರಂಟಿಗಳು ಬರೀ ಸುಳ್ಳಿನ ಕಂತೆಯಾಗಿದೆ: ಕೆಎಸ್‌ ಈಶ್ವರಪ್ಪ

ಕಲಬುರಗಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಕುರಿತು ಉಲ್ಲೇಖವಿರುವುದರಿಂದ ಆಕ್ರೋಶ ವ್ಯಕ್ತಪಡಿಸಿರುವ ಕೆಎಸ್‌ ಈಶ್ವರಪ್ಪ ಕಾಂಗ್ರೆಸ್‌ ಪ್ರಣಾಳಿಕೆ ಸುಟ್ಟು ಹಾಕಿರುವ ಘಟನೆ ನಡೆದಿದೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಯುವ ವೇಳೆ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಕಿಡಿಕಾರಿರುವ ಅವರು ಇದು ಮೊಹಮದ್ ಅಲಿ ಜಿನ್ನಾ ಪ್ರಣಾಳಿಕೆಯಾಗಿದೆ. ಬಜರಂಗ ದಳ ನಿಷೇಧ ಮಾಡುವುದು ಸರಿಯಲ್ಲ, ಗೋಹತ್ಯೆ ತಡೆಯಲು ಮುಂದಾಗಿರುವ ಬಜರಂಗ ದಳ ಬ್ಯಾನ್‌ ಮಾಡಲು ಕಾಂಗ್ರೆಸ್‌ ನಿರ್ಧರಿಸಿದೆ. ಹೀಗಾಗಿ ನಾನು ಕಾಂಗ್ರೆಸ್‌ ಪ್ರಣಾಳಿಕೆಯನ್ನು ನಿಮ್ಮ ಮುಂದೆ ಸುಡುತ್ತಿದ್ದೇನೆ ಎಂದು ಬೆಂಕಿಕಡ್ಡಿ ಕೀರಿದರು.

ಕಾಂಗ್ರೆಸ್‌ ಗ್ಯಾರಂಟಿಗಳು ಬರೀ ಸುಳ್ಳಿನ ಕಂತೆಯಾಗಿದೆ. ಅದು ಬರೀ ಸುಳ್ಳಿನ ಭರವಸೆಗಳಾಗಿದೆ. ಈ ಪ್ರಣಾಳಿಕೆಯಿಂದ ಯಾವ ಪ್ರಯೋಜನ ಇಲ್ಲ. ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಹೇಳಿರುವುದರಿಂದ ರಾಜ್ಯದ ಎಲ್ಲ ಹಿಂದೂಗಳಿಗೆ ನೋವಾಗಿದೆ. ಕಾಂಗ್ರೆಸ್‌ ಮನಸ್ಥಿತಿ ಏನು ಎಂದು ಜನರಿಗೆ ಗೊತ್ತಾಗಿದೆ. ರಾಜ್ಯದಲ್ಲಿ ಎಲ್ಲ ಮುಸ್ಲಿಮರು ಒಂದೇ ರೀತಿ ಇಲ್ಲ. ಕೆಲವರು ಕಾಂಗ್ರೆಸ್‌ ವಿರೋಧಿಸುತ್ತಾರೆ. ಇದು ನೇರವಾಗಿ ಮುಸ್ಲಿಂ ಲೀಗ್‌ನ ಪ್ರಣಾಳಿಕೆಯಾಗಿದೆ.

ಬಜರಂಗ ದಳ ಬ್ಯಾನ್‌ ಮಾಡುವ ಮೂಲಕ ಮುಸ್ಲಿಮರ ತುಷ್ಟೀಕರಣಕ್ಕೆ ಕಾಂಗ್ರೆಸ್‌ ಇಳಿದಿದೆ. ಹೀಗಾಗಿ ಎಲ್ಲ ರಾಷ್ಟ್ರಭಕ್ತ ನಾಗರಿಕರು ಈ ಕಾಂಗ್ರೆಸ್‌ ಪ್ರಣಾಳಿಕೆ ಬಹಿಷ್ಕರಿಸಲು ಮುಂದಾಗಬೇಕು ಎಂದು ಕೋರಿದರು. ಬಜರಂಗದಳ ಎಂದರೆ ಆಂಜನೇಯನ ಅನುಯಾಯಿಗಳು. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದು ರಾವಣ. ಹೀಗಾಗಿ ಆಂಜನೇಯ ಬಾಲಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಕಾಂಗ್ರೆಸ್ ದೇಶದೆಲ್ಲೆಡೆ ಸರ್ವನಾಶವಾಗಲಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನ ಕೂಡ ಕಳೆದುಕೊಳ್ಳಲಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾಕೆ ಎನ್ನುವುದೇ ಕಾಂಗ್ರೆಸ್‍ಗೆ ಗೊತ್ತಿಲ್ಲ. ಧರ್ಮ, ಜಾತಿ ವಿಚಾರದಲ್ಲಿ ವಿಷಬೀಜ ಬಿತ್ತುವ ಸಂಘಟನೆಗಳ ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Related