ರಾಜಿ ಪ್ರಕ್ರಿಯೆ ಮುಂದಕ್ಕೆ

ರಾಜಿ ಪ್ರಕ್ರಿಯೆ ಮುಂದಕ್ಕೆ

ಬೆಂಗಳೂರು, ಫೆ. 3 : ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಪರಸ್ಪರ ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಸಂಬಂಧ ಶಾಸಕ ಆನಂದ್ಸಿಂಗ್ ಮತ್ತೆ ಹೈಕೋರ್ಟ್ಗೆ ಗೈರು ಹಾಜರಾದರು. ಹಾಗಾಗಿ, ರಾಜಿ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಜ. 22 ರಂದು ಕೂಡ ಆನಂದ್ ಸಿಂಗ್ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರು. ಆಗ ನ್ಯಾಯಾಲಯ ಆನಂದ್ಸಿಂಗ್ ಹಾಜರಾತಿಗೆ 10 ದಿನಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಫೆ. 3ಕ್ಕೆ ಮುಂದೂಡಿತ್ತು.

ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಬಿಎ ಪಾಟೀಲ್ ಅವರಿದ್ದ ಏಸಕದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತು. ನಿಗದಿಯಂತೆ ಆನಂದ್ಸಿಂಗ್ ಹಾಜರಾಗಬೇಕಿತ್ತು, ಆದರೆ ಹಾಜರಾಗಲಿಲ್ಲ. ಹಾಗಾಗಿ, ನ್ಯಾಯಪೀಠ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿತು. ನ್ಯಾಯಾಲಯ ಇಬ್ಬರೂ ಖುದ್ದು ಹಾಜರಾಗಿ ಹೇಳಿಕೆ ನೀಡಿದರೆ ಮಾತ್ರ ರಾಜೀ ಮೆಮೋ ಒಪ್ಪಲಾಗುವುದು ಎಂದು ಹಿಂದೆಯೇ ಸ್ಪಷ್ಟವಾಗಿ ಹೇಳಿತ್ತು.

Related