ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಹಾಗೂ ಸರ್ವೇ ಕಾರ್ಯ ಮುಂದುವರಿಕೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಹಾಗೂ ಸರ್ವೇ ಕಾರ್ಯ ಮುಂದುವರಿಕೆ

ಬೆಂಗಳೂರು: ಬಿಬಿಎಂಪಿಯ ದಾಸರಹಳ್ಳಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ 3 ಕಾಲು ಗುಂಟೆ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿದ್ದ 11 ಒತ್ತುವರಿಗಳ ಪೈಕಿ ನಿನ್ನೆ ಬಹುತೇಕ ಒತ್ತುವರಿ ಭಾಗವನ್ನು ತೆರವುಗೊಳಿಸಿದ್ದು, ಇಂದು ಕೂಡಾ ಅದೇ ಸ್ಥಳದಲ್ಲಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಕೆಲ ಭಾಗದಲ್ಲಿ ಹಿಟಾಚಿಯ ಮೂಲಕ ತೆರವುಗೊಳಿಸಿದ್ದು, ಇನ್ನು ಕೆಲವೆಡೆ ಮನೆಯ ಕೆಲ ಭಾಗವನ್ನು ಮನೆಯ ಮಾಲೀಕರೇ ಸ್ವತಃ ತೆರವುಗೊಳಿಸುವುದಾಗಿ ತಿಳಿಸಿರುತ್ತಾರೆ. ಈ ಸಂಬಂಧ ಕೂಡಲೆ ಮಳೆ ನೀರುಗಾಲುವೆ ಮೇಲೆಯಿರುವ ಭಾಗವನ್ನು ತೆರವುಗೊಳಿಸಲು ಸೂಚನೆ ನೀಡಲಾಗಿರುತ್ತದೆ.

ಯಲಹಂಕ ವಲಯ ಕುವೆಂಪುನಗರ ವಾರ್ಡ್ ಸಿಂಗಾಪುರ ಲೇಔಟ್ ನಲ್ಲಿ ಒತ್ತುವರಿಯಾಗಿದ್ದ ಜಾಗದ ತೆರವು ಕಾರ್ಯಾಚರಣೆಯನ್ನು ಇಂದು ಕೂಡಾ ಮುಂದುವರಿಸಲಾಗಿದ್ದು, ಲ್ಯಾಂಡ್ ಮಾರ್ಕ್ ಅಪಾರ್ಟ್ಮ್ಂಟ್ ನಲ್ಲಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೆ ಸಿಂಗಾಪುರ ಲೇಔಟ್‌ನಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸ್ಥಳದಲ್ಲಿ ಜೆಸಿಬಿ ಮೂಲಕ ಮಳೆ ನೀರು ಗಾಲುವೆಯನ್ನು ನಿರ್ಮಾಣ ಮಾಡಲಾಗಿರುತ್ತದೆ.

ಮಹದೇವಪುರ ವಲಯ ಸರ್ವೇ ಕಾರ್ಯ ಚುರುಕು

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಭೂಮಾಪಕ ಇಲಾಖೆ ವತಿಯಿಂದ ಕಂದಾಯ ಇಲಾಖೆಯ ತಹಶೀಲ್ದಾರ್ ರವರ ನೇತೃತ್ವದಲ್ಲಿ ವಾಗ್ದೇವಿ ಮುನ್ನೇಕೊಳಲು, ಕಸವನಹಳ್ಳಿ ಗ್ರಾಮ, ದೊಡ್ಡಕನ್ನಹಳ್ಳಿಯಲ್ಲಿ ಬರುವ ಎ.ಬಿ.ಕೆ ವಿಲೇಜ್, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೋ, ಸನ್ನೀ ಬ್ರೂಕ್ಸ್, ಬೆಳತ್ತೂರು ಗ್ರಾಮ, ಸಾದರಮಂಗಲ ಗ್ರಾಮ, ಬಿಲ್ಲಿನೇನಿ ಸಾಸ ಅಪಾರ್ಟ್ಮ್ಂಟ್‌ನ ಒಳ ಪ್ರದೇಶ, ಸಾಯಿ ಗಾರ್ಡನ್ ಬಡಾವಣೆ, ವರ್ತೂರಿನಿಂದ ಶೀಲವಂತನ ಕೆರೆ ಸೇರಿದಂತೆ ಇನ್ನಿತರೆ ಕಡೆ ಸರ್ವೇ ಕಾರ್ಯ ನಡೆಸಿ ಮಾರ್ಕಿಂಗ್ ಮಾಡಲಾಗುತ್ತಿದೆ.

ಸರ್ವೇ ಮಾಡಿ ಮಾರ್ಕ್ ಮಾಡಿದ ನಂತರ ಖಾಲಿ ಜಾಗ, ಕಾಂಪೌಂಡ್ ಗೋಡೆಗಳಲಿದ್ದಲ್ಲಿ ಕೂಡಲೆ ತೆರವು ಕಾರ್ಯಾಚರಣೆ ನಡೆಸಲಾಗುವುದು. ರಾಜಕಾಲುವೆಗಳ ಮೇಲೆ ಜನರು ವಾಸಿಸುವ ಮನೆಗಳಿದ್ದಲ್ಲಿ ಸಂಬಂಧಪಟ್ಟವರಿಗೆ ಕಂದಾಯ ಇಲಾಖೆಯ ತಹಶಿಲ್ದಾರರಿಂದ ನೋಟಿಸ್ ನೀಡಿ ಮೂರು ದಿನ ಕಾಲಾವಕಾಶ ನೀಡಲಾಗುತ್ತದೆ. ಅದಾದ ಬಳಿಕ ನಿಯಮಾನುಸಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಮಹದೇವಪುರ ವಲಯ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ರವರು ತಿಳಿಸಿದರು.

Related