ಪೌರಕಾರ್ಮಿಕರು ಕಾರ್ಯತತ್ಪರತೆ ಉಳ್ಳವರು

ಪೌರಕಾರ್ಮಿಕರು ಕಾರ್ಯತತ್ಪರತೆ ಉಳ್ಳವರು

ಬೇಲೂರು: ಪೌರಕಾರ್ಮಿಕರು ಕೆಳಸ್ತರದಿಂದ ಬಂದಿದ್ದರೂ ಹೃದಯ ಶ್ರೀಮಂತಿಕೆ, ಕಾರ್ಯತತ್ಪರತೆ ಉಳ್ಳವರಾಗಿದ್ದಾರೆಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಪುಟ್ಟಮ್ಮ ಚನ್ನಕೇಶವೇಗೌಡರ ಕಲ್ಯಾಣ ಮಂಟಪದಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ ಪೌರಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ಆಶಯದಂತೆ ಕಾಯಕವೆ ಕೈಲಾಸ ಎಂದರಿತು ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಪೌರಕಾರ್ಮಿಕರು, ನೀರು ಸರಬರಾಜುದಾರರು ಸೇವೆ ಸಲ್ಲಿಸಿದ್ದಾರೆ.
ಪೌರಕಾರ್ಮಿಕರಿಗೆ ನಿವೇಶನ ಕೊಡಬೇಕೆಂಬ ನನ್ನ ಆಶಯ ಈಡೇರಿಲ್ಲ. ಭೂಮಿ ವಿವಾದ ನ್ಯಾಯಾಲಯದಲ್ಲಿದ್ದು ಪುರಸಭೆಯಿಂದ ನಿವೇಶನ ಹಂಚಿಕೆಗೆ ತೊಡಕಾಗಿದೆ. ಖಾಸಗಿಯಾಗಿಯೂ ಭೂಮಿ ದೊರಕುತ್ತಿಲ್ಲ ಇದಕ್ಕಾಗಿ ನಿವೇಶನ ರಹಿತರಲ್ಲಿ ಕ್ಷಮೆ ಕೋರುತ್ತೇನೆಂದರು.
ಪಟ್ಟಣದಲ್ಲಿ ಶಾಂತಲಾ ಕಲಾಭವನ ನಿರ್ಮಾಣದ ಕನಸು ಈಡೇರಿಲ್ಲ. ಪುರಸಭೆಗೆ ಶೀಘ್ರ ಚುನಾವಣೆ ನಡೆದರೆ ವಾರ್ಡುವಾರು ಸಮಸ್ಯೆಗಳ ಅವಲೋಕನಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಗಿರೀಶನಂದನ್ ಮಾತನಾಡಿ, ಕೊರೋನಾ ಸಂಕಷ್ಟದ ದಿನದಲ್ಲಿಯೂ ಪೌರಕಾರ್ಮಿಕರು ಸಮರ್ಪಕ ಕೆಲಸ ನಿರ್ವಹಿಸಿದ್ದಾರೆ. ಬೇಲೂರು ಪುರಸಭೆ ಬಗ್ಗೆ ದೂರುಗಳು ತೀರಾವಿರಳವಾಗಿದ್ದು ಇಲ್ಲಿನ ನೌಕರರ ಸಮರ್ಪಕ ಕಾರ್ಯನಿರ್ವಹಣೆ ಇದಕ್ಕೆ ಕಾರಣವೆಂದರು. ಪುರಸಭ ಮಾಜಿ ಅಧ್ಯಕ್ಷ ಬಿ.ಗಿರೀಶ್ ಮಾತನಾಡಿ, ಪೌರಕಾರ್ಮಿಕರಿಗೆ ನಿವೇಶನ ಕೊಡುವಲ್ಲಿ ಭರವಸೆಯಷ್ಟೆ ಆಗುತ್ತಿದ್ದು ಕಡ್ಡಾಯವಾಗಿ ನೀಡಬೇಕೆಂದರು. ಗಿರೀಶ್ ಅಧ್ಯಕ್ಷರಾಗಿರುವ ಕೃಷಿಪತ್ತಿನ ಸಹಕಾರ ಸಂಘದಿಂದ ಪೌರಕಾರ್ಮಿಕರಿಗೆ ಶೇರುದಾರ ಕಾರ್ಡುಗಳ ನೀಡಲಾಗುತ್ತಿದೆ ಎಂದರು.

Related