ಚೆಕ್ ಬೌನ್ಸ್ : ಅಪರಾಧಿಗೆ ಜೈಲು ಶಿಕ್ಷೆ

ಚೆಕ್ ಬೌನ್ಸ್ : ಅಪರಾಧಿಗೆ ಜೈಲು ಶಿಕ್ಷೆ

ರಬಕವಿ-ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಶ್ರೀ ಸದ್ಗುರು ಶರಣಬಸವೇಶ್ವರ ಸೌಹಾರ್ದ ಸಹಕಾರಿಯಲ್ಲಿ ಸಾಲ ಪಡೆದು ನಿಗದಿತ ಸಮಯದಲ್ಲಿ ಸಾಲವನ್ನು ಮರುಪಾವತಿಸಲು ವಿಫಲನಾದ ಸಾಲಗಾರನಿಗೆ ಬನಹಟ್ಟಿಯ ಹಿರಿಯ ದಿವಾನಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ಹಾಗೂ 5000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ : 09.09.2015 ರಲ್ಲಿ ಸೌಹಾರ್ದ ಸಹಕಾರಿಯಲ್ಲಿ 3,50,000 ರೂ ಸಾಲ ಪಡೆದ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ಬಸಪ್ಪ ಕೃಷ್ಣಪ್ಪ ಮಾಸ್ತಿ ಸಾಲ ಮರುಪಾವತಿಗಾಗಿ 2,60,000 ರೂ.ಗಳ ಚೆಕ್ ನೀಡಿದ್ದಾನೆ. ಚೆಕ್ ಸಂಬಂಧಿಸಿದ ಬ್ಯಾಂಕಿನಲ್ಲಿ ನಗದಾಗದೆ ಇರುವುದರಿಂದ  ಸೌಹಾರ್ದ  ಸಹಕಾರಿಯು  ಆರೋಪಿತನ  ವಿರುದ್ಧ  ಬನಹಟ್ಟಿಯ  ಜೆಎಂಎಫ್‌ಸಿ ನ್ಯಾಯಾಲಯದಲ್ಲಿ  14.02.2019 ರಂದು ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ವಿವಾದಗಳನ್ನು ಆಲಿಸಿದ ಹಿರಿಯ ದಿವಾನಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣಕುಮಾರ ಡಿ ವಡಿಗೇರಿ ಅಪರಾಧಿಗೆ ಸೆಕ್ಷನ್ 338 ರನ್ವಯ 6 ತಿಂಗಳ ಜೈಲುವಾಸ ಹಾಗೂ 5000 ರೂ. ದಂಡ ವಿಧಿಸಿದೆ.

ಒಂದು ವೇಳೆ ದಂಡವನ್ನು ತುಂಬಲು ವಿಫಲನಾದರೆ ಆರೋಪಿಗೆ ಮೂರು ತಿಂಗಳ ಅಧಿಕ ಜೈಲುವಾಸದ ತೀರ್ಪು ನೀಡಿದ್ದು ಸೆಕ್ಷನ್ 157 ಸಿಆರ್‌ಪಿಸಿ ಅನ್ವಯ ಅಪರಾಧಿ ಪಿರ್ಯಾದಿದಾರ ಸಹಕಾರಿಗೆ ಒಂದು ತಿಂಗಳೊಳಗಾಗಿ 5,21,680 ರೂ .ಗಳನ್ನೂ ಪಾವತಿಸುವಂತೆ ಆದೇಶಿಸಿದೆ. ಸೌಹಾರ್ದ ಸಹಕಾರಿ ಪರ ಹಿರಿಯ ನ್ಯಾಯವಾದಿ ಬಿಎಂ ಗುರುವ ವಾದ ಮಂಡಿಸಿದರು.

Related