ಅಧಿಕಾರಿಗಳ ವಿದೇಶಿ ತರಬೇತಿಗೆ ಬ್ರೇಕ್

ಅಧಿಕಾರಿಗಳ ವಿದೇಶಿ ತರಬೇತಿಗೆ ಬ್ರೇಕ್

ನವದೆಹಲಿ : ಕೋವಿಡ್-೧೯ ಪರಿಣಾಮವಾಗಿ ಅಧಿಕಾರಿಗಳನ್ನು ವಿದೇಶಕ್ಕೆ ಕಳುಹಿಸಿ ತರಬೇತಿ ನೀಡಲಾಗುವ ಎಂದಿನ ಪರಿಪಾಠಕ್ಕೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ತನ್ನ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಮಾಹಿತಿ ರವಾನಿಸಿದ್ದು, ಅಧಿಕಾರಿಗಳಿಗೆ ವಿದೇಶ ತರಬೇತಿಯನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.

ಸಿಬ್ಬಂದಿ ಮತ್ತು ತರಬೇತಿ (ಡಿಒಪಿಟಿ) ಕೇಡರ್ ಕಂಟ್ರೋಲಿಂಗ್ ವಿಭಾಗ, ಕೇಂದ್ರ ತರಬೇತಿ ಇನ್‌ಸ್ಟಿಟ್ಯೂಟ್‌ಗಳು ತನ್ನ ವ್ಯಾಪ್ತಿಗೆ ಬರುವ ಅಧಿಕಾರಿಗಳಿಗೆ ವಿದೇಶಿ ತರಬೇತಿಯನ್ನು ಒಟ್ಟಾರೆ ತರಬೇತಿಯ ಭಾಗವಾಗಿಸಿಕೊಂಡಿದೆ.

ಆದರೆ ಈ ಬಾರಿ ಕೋವಿಡ್-೧೯ ಸಾಂಕ್ರಾಮಿಕ ರೋಗ ಹಾಗೂ ಅದರ ಪರಿಣಾಮವಾಗಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಧಿಕಾರಿಗಳನ್ನು ವಿದೇಶಕ್ಕೆ ಕಳುಹಿಸಿ ತರಬೇತಿ ಕೊಡಿಸುವುದನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಆದರೆ ವಿಶೇಷ ಸಂದರ್ಭಗಳಲ್ಲಿ ಅಧಿಕಾರಿಗಳನ್ನು ವಿದೇಶಕ್ಕೆ ಕಳಿಸಿ ತರಬೇತಿ ಕೊಡಿಸುವುದಾದರೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಅಧಿಕಾರಿಗಳಿಗೆ ವಿದೇಶ ತರಬೇತಿ ಕೊಡಿಸುವುದಕ್ಕಾಗಿ ಹಾಗೂ ಇನ್ನಿತರ ಮೂಲಸೌಕರ್ಯ ಕಲ್ಪಿಸುವುದಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನಿರ್ಮಲಾ ಸೀತಾರಾಮನ್ ೨೩೮.೪೫ ಕೋಟಿ ಅನುದಾನ ಘೋಷಿಸಿದ್ದರು. ಈ ಪೈಕಿ ೮೩.೪೫ ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ದೆಹಲಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಸೆಕ್ರೆಟೇರಿಯೆಟ್ ಟ್ರೈನಿಂಗ್ ಹಾಗೂ ಮ್ಯಾನೇಜ್ಮೆಂಟ್ (ಐಎಸ್ ಟಿಎಂ) ನ ಸ್ಥಾಪನೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಬಳಕೆ ಮಾಡಲಾಗಿದೆ.

Related